ಸಾಂದರ್ಭಿಕ ಚಿತ್ರ
ನವದೆಹಲಿ: ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶುಕ್ರವಾರ ಮುಂಜಾನೆ ಹೊರಡಬೇಕಿದ್ದ 400ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬ ಆಯಿತು.
ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಎದುರಿನ ಗೋಚರತೆಯು ಶೂನ್ಯ ಪ್ರಮಾಣದಲ್ಲಿತ್ತು. ಹೀಗಾಗಿ ವಿಮಾನಗಳ ಸಂಚಾರ ವಿಳಂಬವಾಯಿತು. ಆದರೆ, ಯಾವುದೇ ವಿಮಾನಗಳು ಮಾರ್ಗ ಬದಲಿಸಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.comನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 470 ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ.
ರಾಜಸ್ಥಾನದಲ್ಲಿ ತಾಪಮಾನವು ಶುಕ್ರವಾರ ಮುಂಜಾನೆ ಸ್ವಲ್ಪ ಏರಿಕೆಯಾಗಿತ್ತು. ಆದರೆ ಹಲವೆಡೆ ಚಳಿಯ ವಾತಾವರಣ ಮುಂದುವರಿದಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹಲವಡೆ ದಟ್ಟವಾಗಿ ಮಂಜು ಆವರಿಸಿತ್ತು. 5.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವ ವನಸ್ಥಾಲಿಯು ರಾಜಸ್ಥಾನದ ಅತ್ಯಂತ ಶೀತ ಪ್ರದೇಶವಾಗಿದ್ದು ರಾಜ್ಯದ ಎತ್ತರದ ಪ್ರದೇಶ ಮೌಂಟ್ ಅಬುವಿನಲ್ಲಿ 0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಶುಕ್ರವಾರ ಮುಂಜಾನೆ 8 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ರಾಜಧಾನಿ ಜೈಪುರದಲ್ಲಿ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.