ADVERTISEMENT

ಸೇನಾ ಕ್ಯಾಂಟೀನ್‌ನಲ್ಲಿ ವಿದೇಶಿ ವಸ್ತು ನಿಷೇಧ ಆದೇಶ ವಾಪಸ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 19:45 IST
Last Updated 1 ಜೂನ್ 2020, 19:45 IST

ನವದೆಹಲಿ: ದೇಶದ ಸೇನಾ ಕ್ಯಾಂಟೀನ್‌ಗಳಲ್ಲಿ ವಿದೇಶಿ ವಸ್ತುಗಳ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ತಕ್ಷಣವೇ ಅದನ್ನು ಹಿಂದಕ್ಕೆ ಪಡೆದಿದೆ. ಸ್ವಾವಲಂಬಿ ಭಾರತ ಅಭಿಯಾನದ (ಆತ್ಮನಿರ್ಭರ) ಅಂಗವಾಗಿ, ವಿದೇಶದ 1,026 ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ಪಟ್ಟಿಯಲ್ಲಿ ಭಾರತದಲ್ಲಿ ತಯಾರಾದ ವಸ್ತುಗಳೂ ಸೇರಿಕೊಂಡಿದ್ದರಿಂದ ಮುಜುಗರ ಎದುರಿಸಿದ ಸರ್ಕಾರ, ಪುನರ್ ಪರಿಶೀಲನೆಗಾಗಿ ಪಟ್ಟಿ ವಾಪಸ್ ಪಡೆದಿದೆ.

ಬಿಜೆಪಿಯ ಮಾಜಿ ಸಂಸದರಾದ ದಿವಂಗತ ಶೀಲಾ ಗೌತಮ್ ಅವರು ಸ್ಥಾಪಿಸಿದ್ದ ಕಂಪನಿಯ ಸ್ಲೀಪ್‌ವೆಲ್ ಮ್ಯಾಟ್ರೆಸಸ್ ಉತ್ಪನ್ನಗಳು, ವಿಐಪಿ ಸೂಟ್‌ಕೇಸ್, ಡಾಬರ್‌ನ ಉತ್ಪನ್ನಗಳು, ಬಜಾಜ್‌ ಮತ್ತು ಟಿಟಿಕೆ ಪ್ರೆಸ್ಟೀಜ್ ಸೇರಿದಂತೆ ಭಾರತದಲ್ಲಿ ತಯಾರಾದ ವಸ್ತುಗಳು ಈ ಪಟ್ಟಿಯಲ್ಲಿದ್ದವು. ಈ ಹಿಂದಿನ ಆದೇಶದ ಪ್ರಕಾರ, ಈ ವಸ್ತುಗಳ ಮಾರಾಟನ್ನು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದಲ್ಲಿ (ಸಿಪಿಸಿ) ಜೂನ್ 1ರಿಂದ ನಿಷೇಧಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯಂತೆ, ಸೇನಾ ಕ್ಯಾಂಟೀನ್‌ಗಳಲ್ಲಿ ಜೂನ್ 1ರಿಂದ ಸ್ವದೇಶಿ ವಸ್ತುಗಳು ಮಾತ್ರ ಮಾರಾಟವಾಗಬೇಕು ಎಂದು ಗೃಹಸಚಿವ ಅಮಿತ್ ಶಾ ಮೇ 13ರಂದು ನಿರ್ದೇಶನ ನೀಡಿದ್ದರು. ಇದರನ್ವಯ ಮೇ 29ರಂದು ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಪ್ರಧಾನ ವ್ಯವಸ್ಥಾಪಕಿ ಆರ್.ಎಂ. ಮೀನಾ ಅವರು ವಿದೇಶಿ ವಸ್ತುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.

ADVERTISEMENT

ಭಾರತದಲ್ಲಿ ತಯಾರಾದ ವಸ್ತಗಳನ್ನು ಮಾತ್ರ ದೇಶದ 119 ಪ್ರಮುಖ ಕ್ಯಾಂಟೀನ್‌ಗಳು ಹಾಗೂ 1,778 ಸಹ ಕ್ಯಾಂಟೀನ್‌ಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.

ಸರ್ಕಾರ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಭಾರತದ ಕಂಪನಿಗಳು ತಯಾರಿಸಿದ ಹಾಗೂ ಭಾರತದ ನೆಲದಲ್ಲಿ ವಿದೇಶಿ ಕಂಪನಿಗಳು ತಯಾರಿಸಿದ ವಸ್ತುಗಳೂ ಜಾಗ ಪಡೆದಿದ್ದು ಗೊಂದಲಕ್ಕೆ ಕಾರಣವಾಗಿದೆ. ತಕ್ಷಣ ಎಚ್ಚೆತ್ತ ಸರ್ಕಾರವು ಪಟ್ಟಿ ವಾಪಸ್ ಪಡೆಯಿತು.

ಮೇಲಧಿಕಾರಿಯ ಒಪ್ಪಿಗೆ ಪಡೆಯುವ ಮುನ್ನವೇ ಅಧಿಕಾರಿಗಳು ಪಟ್ಟಿ ಪ್ರಕಟಿಸಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಪಟ್ಟಿ ಬಿಡುಗಡೆ ಮಾಡಿದ ಅಧಿಕಾರಿಯ ಲೋಪದೋಷಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದೂ ಹೇಳಲಾಗಿದೆ. ಆದರೆ, ಸಂಬಂಧಪಟ್ಟವರ ಅನುಮತಿಯಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಹಿಂದಿನ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಮೂರು ವರ್ಗೀಕರಣ
ಮೇ 29ರ ಆದೇಶದಲ್ಲಿ ವಸ್ತುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿತ್ತು. ಸಂಪೂರ್ಣ ಸ್ವದೇಶಿ ನಿರ್ಮಿತ, ವಿದೇಶದಿಂದ ಕಚ್ಚಾವಸ್ತು ಆಮದು ಮಾಡಿಕೊಂಡು ಭಾರತದಲ್ಲೇ ತಯಾರಿಸಿದ ಅಥವಾ ಜೋಡಿಸಿದ ವಸ್ತುಗಳು ಮತ್ತು ಸಂಪೂರ್ಣ ವಿದೇಶದಿಂದ ಆಮದು ಮಾಡಿಕೊಂಡ ವಸ್ತುಗಳು. ಮೂರನೇ ವರ್ಗದ ವಸ್ತಗಳನ್ನು ಕ್ಯಾಂಟೀನ್‌ಗಳಿಂದ ತೆಗೆದುಹಾಕಿ, ಉಳಿದೆರಡು ವರ್ಗದಲ್ಲಿ ಬರುವ ವಸ್ತುಗಳ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ಕಂಪನಿಗಳು ನೀಡಿದ ಮಾಹಿತಿ ಆಧರಿಸಿಯೇ ಈ ವರ್ಗೀಕರಣ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಒಂದು ವೇಳೆ ವ್ಯಾಜ್ಯ ಎದುರಾದಲ್ಲಿ, ಕಂಪನಿಗಳು ನೀಡಿದ ಮಾಹಿತಿಯನ್ನೇ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ. ನೀಡಿದ ಮಾಹಿತಿಯಲ್ಲಿ ತಪ್ಪು ಕಂಡುಬಂದರೆ, ದಾವೆ ಹೂಡಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು.

ಕ್ಯಾಂಟೀನ್‌ನಲ್ಲಿ ಏನೇನು ಲಭ್ಯ?
ಸೇನಾ ಕ್ಯಾಂಟೀನ್‌ಗಳ ಮಾದರಿಯಲ್ಲೇ 2006ರಲ್ಲಿ ಅರೆಸೇನಾಪಡೆಗಳ ಯೋಧರು ಹಾಗೂ ನಿವೃತ್ತ ಯೋಧರ ಕುಟುಂಬಗಳ ಅನುಕೂಲಕ್ಕಾಗಿ ಕ್ಯಾಂಟೀನ್‌ಗಳನ್ನು ತೆರೆಯಲಾಗಿತ್ತು. ಬಳಿಕ, ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಸೌಲಭ್ಯವು ಗೃಹಸಚಿವಾಲಯದ ಸಿಬ್ಬಂದಿ ಹಾಗೂ ಕೇಂದ್ರೀಯ ಭದ್ರತಾ ಸಂಸ್ಥೆಗಳ ಸಿಬ್ಬಂದಿಗೂ ವಿಸ್ತರಣೆಯಾಗಿತ್ತು.

ಸೌಂದರ್ಯವರ್ಧಕ ಸಾಧನಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಪದಾರ್ಥ, ಪಾದರಕ್ಷೆ, ದಿನಸಿ, ಪಾತ್ರೆ ಸಾಮಾನುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಇಲ್ಲಿ ಮಾರಾಟ ಮಾಡಲಾಗುತ್ತದೆ. ಆಟೊಮೊಬೈಲ್ ಕಂಪನಿಗಳ ಜತೆಗೂ ಒಪ್ಪಂದ ಮಾಡಿಕೊಳ್ಳಲಾಗಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನೂ ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.