ADVERTISEMENT

ಉಸಿರು ತೆಗೆಯುವ ಗಾಳಿ!

ವಾಯುಮಾಲಿನ್ಯದಿಂದಲೇ ಹೆಚ್ಚು ಸಾವು: ‘ಸ್ಟೇಟ್ ಆಫ್ ಗ್ಲೋಬಲ್ ಏರ್ 2019’ ವರದಿಯಲ್ಲಿ ಉಲ್ಲೇಖ

ಪಿಟಿಐ
Published 3 ಏಪ್ರಿಲ್ 2019, 20:15 IST
Last Updated 3 ಏಪ್ರಿಲ್ 2019, 20:15 IST
   

ನವದೆಹಲ: ಅಮೆರಿಕದ ಹೆಲ್ತ್ ಎಫೆಕ್ಟ್ಸ್‌ ಇನ್‌ಸ್ಟಿಟ್ಯೂಟ್, ವಾಯುಮಾಲಿನ್ಯ ಕುರಿತು ‘ಸ್ಟೇಟ್ ಆಫ್ ಗ್ಲೋಬಲ್ ಏರ್ 2019’ ಎನ್ನುವ ಜಾಗತಿಕ ವರದಿ ಬಿಡುಗಡೆಗೊಳಿಸಿದ್ದು, ‘ಭಾರತದಲ್ಲಿ ಸಾವುಗಳು ಸಂಭವಿಸಲು ಕಾರಣವಾಗುವ ಅಂಶಗಳಲ್ಲಿ ವಾಯುಮಾಲಿನ್ಯ ಮೂರನೇ ಸ್ಥಾನದಲ್ಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.‌

2017ರಲ್ಲಿ ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳಿಂದ ಸಾವಿಗೀಡಾಗಿದ್ದಾರೆ.

ಜಗತ್ತಿನಲ್ಲಿ ವಾಯುಮಾಲಿನ್ಯದಿಂದ ಸಂಭವಿಸಿದ ಸಾವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತ ಮತ್ತು ಚೀನಾದಲ್ಲಿಯೇ ಆಗಿವೆ ಎನ್ನುವುದು ಗಮನಾರ್ಹ.

ADVERTISEMENT

‘ವಿಶ್ವದಾದ್ಯಂತಅಪೌಷ್ಟಿಕತೆ, ಮದ್ಯಸೇವನೆ, ದೈಹಿಕ ಜಡತ್ವ ಹೆಚ್ಚಾಗಿ ಸಾವಿನ ಅಪಾಯ ಒಡ್ಡುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಇದಕ್ಕಿಂತಲೂ ವಾಯುಮಾಲಿನ್ಯ ಹೆಚ್ಚು ಅಪಾಯಕಾರಿ’ ಎಂದು ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ಮಟ್ಟದಲ್ಲಿ ರಸ್ತೆ ಅಪಘಾತ ಹಾಗೂ ಮಲೇರಿಯಾದಿಂದ ಸಂಭವಿಸುವ ಸಾವುಗಳಿಗಿಂತ, ವಾಯುಮಾಲಿನ್ಯ ಸಂಬಂಧಿ ಅನಾರೋಗ್ಯದಿಂದ ಮೃತಪಡುವವರ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಜೀವಿತಾವಧಿ ಎರಡೂವರೆ ವರ್ಷ ಕಡಿಮೆ
ದಕ್ಷಿಣ ಏಷ್ಯಾದಲ್ಲಿ ಪ್ರಸ್ತುತ ವಾಯುಮಾಲಿನ್ಯ ಅತಿ ಹೆಚ್ಚು ಪ್ರಮಾಣದಲ್ಲಿದೆ. ಹೀಗಾಗಿ ಇಲ್ಲಿಜನಿಸುವ ಶಿಶುಗಳ ಜೀವಿತಾವಧಿ ಎರಡೂವರೆ ವರ್ಷಗಳಷ್ಟು ಕಡಿಮೆಯಾಗಲಿದೆ. ಜಾಗತಿಕ ಮಟ್ಟದಲ್ಲಿ 20 ತಿಂಗಳಷ್ಟು ಜೀವಿತಾವಧಿ ಕಡಿಮೆಯಾಗುತ್ತದೆ ಎಂದು ವರದಿ ಹೇಳಿದೆ.

ಭವಿಷ್ಯದ ಭರವಸೆ
‘ವಾಯುಮಾಲಿನ್ಯ ತಗ್ಗಿಸಲು ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲ, ಅಡುಗೆ ಅನಿಲ ಯೋಜನೆ, ರಾಷ್ಟ್ರೀಯ ವಾಯು ಶುದ್ಧೀಕರಣ ಯೋಜನೆಗಳುಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ, ಮುಂಬರುವ ವರ್ಷಗಳಲ್ಲಿ ಉತ್ತಮ ಆರೋಗ್ಯಕ್ಕೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿವೆ’ ಎಂದು ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷ ರಾಬರ್ಟ್ ಒ’ಕೀಫ್ ಹೇಳಿದ್ದಾರೆ.

ಅಂಕಿ–ಅಂಶ
50 ಲಕ್ಷ:
ದೀರ್ಘಾವಧಿಗೆ ಕಲುಷಿತ ಗಾಳಿ ಸೇವಿಸಿದ್ದರಿಂದ ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್, ಮಧುಮೇಹಕ್ಕೆ ಗುರಿಯಾಗಿ ಜನರ ಸಾವು

30 ಲಕ್ಷ:ಪಿ.ಎಂ 2.5 ಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಮಾಲಿನ್ಯಕಾರಕ ಕಣಗಳಿಂದಾಗಿ ಭಾರತ ಮತ್ತು ಚೀನಾದಲ್ಲಿ ಸಂಭವಿಸಿದ ಸಾವು

(ಪಿ.ಎಂ 2.5 ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ವಾಯುಗುಣಮಟ್ಟ ಮಾನದಂಡದ ಒಂದು ಅಂಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.