ADVERTISEMENT

ದೆಹಲಿ: ಒಂದೇ ದಿನ 24 ಸಾವಿರ ಪ್ರಕರಣ, ಪ್ರತಿ 4 ಪರೀಕ್ಷೆಯಲ್ಲಿ ಒಂದು ಪಾಸಿಟಿವ್‌

ಪಿಟಿಐ
Published 18 ಏಪ್ರಿಲ್ 2021, 5:20 IST
Last Updated 18 ಏಪ್ರಿಲ್ 2021, 5:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ನಾಲ್ಕು ಮಾದರಿ ಪರೀಕ್ಷೆಗಳ ಪೈಕಿ ಒಂದು ಪಾಸಿಟಿವ್‌ ಫಲಿತಾಂಶ ನೀಡುತ್ತಿದೆ.

ಶನಿವಾರ ಒಂದೇ ದಿನ ಇಲ್ಲಿ 24 ಸಾವಿರ ಪ್ರಕರಣಗಳು ದಾಖಲಾಗಿದ್ದವು. ನಡೆಸಲಾದ ಮಾದರಿ ಪರೀಕ್ಷೆಗಳ ಸಂಖ್ಯೆ 99,230 ಆಗಿತ್ತು. ಇದರಿಂದಾಗಿ ದೆಹಲಿ ಸರ್ಕಾರ ಭಾರಿ ಆತಂಕದಲ್ಲಿದ್ದು, ಇದೊಂದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ಮುಖ್ಯಮಂತ್ರಿ ಅರವಿಂಧ ಕೇಜ್ರಿವಾಲ್‌ ಹೇಳಿದ್ದಾರೆ.

ಶುಕ್ರವಾರ 19,500 ಮಂದಿಗೆ ಕೋವಿಡ್‌ ದೃಢಪಟ್ಟಿತ್ತು. ಒಂದೇ ದಿನದಲ್ಲಿ ಮತ್ತೆ ಸುಮಾರು 5 ಸಾವಿರದಷ್ಟು ಹೊಸ ಪ್ರಕರಣಗಳು ದಾಖಲಾಗಿರುವುದರಿಂದ ಇಲ್ಲಿ ಆಮ್ಲಜನಕ, ರೆಮ್‌ಡೆಸಿವಿರ್‌ ಮತ್ತು ತೊಸಿಲಿಞುಮಾಬ್ ಔಷಧಗಳ ಕೊರತೆ ತೀವ್ರವಾಗಿ ಕಾಡತೊಡಗಿದೆ. ಆಸ್ಪತ್ರೆಗಳೂ ಭರ್ತಿಯಾಗತೊಡಗಿದ್ದು, ಹಾಸಿಗೆಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಲಾಗುತ್ತಿದೆ.

ADVERTISEMENT

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾದರೆ ಜನರ ಜೀವ ಉಳಿಸುವುದು ಸರ್ಕಾರದ ಪ್ರಮುಖ ಆದ್ಯತೆ ಆಗಿರಲಿದೆ. ಹೀಗಾಗಿ ಕೈಗೊಳ್ಳುವ ಯಾವುದೇ ಕಠಿಣ ಕ್ರಮಕ್ಕೆ ಜನರು ಸಿದ್ಧರಾಗಿರಬೇಕು’ ಎಂಬ ಸೂಚನೆಯನ್ನು ಕೇಜ್ರಿವಾಲ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.