ADVERTISEMENT

ಅಸ್ಸಾಂ | ಕೋವಿಡ್ ಪರೀಕ್ಷೆಗೆ ತಕರಾರು: 300 ವಿಮಾನ ಪ್ರಯಾಣಿಕರು ಪರಾರಿ

ಪಿಟಿಐ
Published 22 ಏಪ್ರಿಲ್ 2021, 11:25 IST
Last Updated 22 ಏಪ್ರಿಲ್ 2021, 11:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಲ್ಚಾರ್, ಅಸ್ಸಾಂ: ಕೋವಿಡ್ ತಪಾಸಣೆಗೆ ವಿರೋಧ ವ್ಯಕ್ತಪಡಿಸಿ ಗೊಂದಲ ಮೂಡಿಸಿದ 300 ಜನ ಪ್ರಯಾಣಿಕರು, ಬಳಿಕ ನಿಲ್ದಾಣದಿಂದಲೇ ಪರಾರಿಯಾದ ಘಟನೆ ಇಲ್ಲಿನ ಸಿಲ್ಚಾರ್ ವಿಮಾನನಿಲ್ದಾಣದಲ್ಲಿ ಬುಧವಾರ ನಡೆದಿದೆ. ಈ ಪ್ರಯಾಣಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿವಿಧ ನಿಲ್ದಾಣಗಳಿಂದ ಸುಮಾರು 690 ಪ್ರಯಾಣಿಕರು ಬಂದಿದ್ದರು. ಇವರು ಸಮೀಪದ ಟಿಕೊಲ್‌ ಮಾಡೆಲ್‌ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಬೇಕಿತ್ತು. ತಪಾಸಣೆಗೆ ₹ 500 ನೀಡಬೇಕು ಎಂದು ತಕರಾರು ತೆಗೆದ 300 ಜನರು ಗೊಂದಲ ಮೂಡಿಸಿ, ಬಳಿಕ ಪರಾರಿಯಾದರು’ ಎಂದು ಕಚಾರ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಸುಮಿತ್ ಸಟ್ಟವನ್‌ ತಿಳಿಸಿದ್ದಾರೆ.

ಹೊರಗಡೆಯಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆಯನ್ನು ಅಸ್ಸಾಂ ಸರ್ಕಾರ ಕಡ್ಡಾಯಪಡಿಸಿದೆ. ಉಚಿತವಾಗಿ ಉಚಿತ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯನ್ನು ನಡೆಸಲಿದ್ದು, ಬಳಿಕ ರೂ.500 ಪಡೆದು ಆರ್‌ಟಿ–ಪಿಸಿಆರ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗಿದೆ.

ADVERTISEMENT

ಪ್ರಯಾಣಿಕರು ನಿಯಮ ಉಲ್ಲಂಘಿಸಿದ್ದಾರೆ. ನಮ್ಮ ಬಳಿ ಪ್ರಯಾಣಿಕರಿಗೆ ಸಂಬಂಧಿಸಿದ ವಿವರಗಳಿವೆ. ಅವರನ್ನು ಗುರುತಿಸಿ ಐಪಿಸಿ ಸೆಕ್ಷನ್‌ 188ರ ಅನ್ವಯ (ಸೇವೆಗೆ ಅಡ್ಡಿ) ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇವೆ. 690 ಪ್ರಯಾಣಿಕರ ಪೈಕಿ 189 ಜನರಿಗೆ ಪರೀಕ್ಷೆ ನಡೆಸಿದ್ದು, 6 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಸುಮಿತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.