ADVERTISEMENT

ಕಾಶ್ಮೀರದ ರಾಜಕೀಯ ನಾಯಕರಿಗೆ ಮರಳಿ ಭದ್ರತೆ ನಿಯೋಜನೆ

ಏಜೆನ್ಸೀಸ್
Published 8 ಏಪ್ರಿಲ್ 2019, 2:42 IST
Last Updated 8 ಏಪ್ರಿಲ್ 2019, 2:42 IST
   

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ 400 ರಾಜಕೀಯ ನಾಯಕರಿಗೆ ಮರಳಿ ಭದ್ರತೆ ಒದಗಿಸಲಾಗಿದೆ. ಅಲ್ಲಿನ 900ಕ್ಕೂ ಅಧಿಕ ಮಂದಿ ರಾಜಕೀಯ ನಾಯಕರಿಗೆ ಕಲ್ಪಿಸಲಾಗಿದ್ದ ಭದ್ರತೆಯನ್ನು ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರವಷ್ಟೇ ರದ್ದುಗೊಳಿಸಲಾಗಿತ್ತು. ಆದರೆ, ಭದ್ರತೆ ಹಿಂಪಡೆದಿದ್ದರಿಂದ ಎದುರಾದ ಆಕ್ಷೇಪಣೆಗಳಿಗೆ ಮಣಿದು ರಾಜ್ಯಪಾಲರು ಭಾನುವಾರ ಮರಳಿ ಭದ್ರತೆ ಕಲ್ಪಿಸಿದ್ದಾರೆ.

ಭದ್ರತೆಯನ್ನು ಶುಕ್ರವಾರ ಹಿಂಪಡೆಯುತ್ತಲೇ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು. ‘ಭಯೋತ್ಪಾದನಾ ಚಟುವಟಿಕೆ ಇರುವ ಕಾಶ್ಮೀರದಲ್ಲಿ ರಾಜಕೀಯ ಮುಖಂಡರ ಭದ್ರತೆಯನ್ನು ಹಿಂಪಡೆಯುತ್ತಿರುವುದರ ಹಿಂದೆ ಚುನಾವಣೆ ಪ್ರಕ್ರಿಯೆಯನ್ನೇ ಅಸ್ತವ್ಯಸ್ತಗೊಳಿಸುವ, ನಾಯಕರುಗಳನ್ನು ಅಪಾಯಕ್ಕೆ ಸಿಲುಕಿಸುವ ಷಡ್ಯಂತ್ರವಿದೆ,’ ಎಂದು ಆರೋಪಿಸಿದ್ದರು. ಇದಾದ ಮರುದಿನವೇ ರಾಜ್ಯಪಾಲ ಸತ್ಯಪಾಲ್‌ ಮಲೀಕ್‌ ಅವರು 400 ಮುಖಂಡರಿಗೆ ಭದ್ರತೆಯನ್ನು ಮರಳಿ ಕಲ್ಪಿಸಿದ್ದಾರೆ.

ಫೆಬ್ರುವರಿ 14ರ ಪುಲ್ವಾಮಾ ದಾಳಿಯ ಬಳಿಕ ಜಮ್ಮು ಕಾಶ್ಮೀರದ ರಾಜಕೀಯ ಮುಖಂಡರು ಮತ್ತು ಪ್ರತ್ಯೇಕವಾದಿಗಳ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಹೀಗಿರುವಾಗಲೇ ಶುಕ್ರವಾರ 900 ರಾಜಕೀಯ ಮುಖಂಡರ ಭದ್ರತೆಯನ್ನು ಹಿಂಪಡೆಯುತ್ತಿರುವುದಾಗಿ ಕೇಂದ್ರ ಗೃಹ ಇಲಾಖೆ ಹೇಳಿತ್ತು. ಈ ಮೂಲಕ 2,768 ಭದ್ರತಾ ಸಿಬ್ಬಂದಿಯನ್ನು ನಿಯೋಜನೆಯಿಂದ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿತ್ತು.

ADVERTISEMENT

ಇದಕ್ಕೂ ಮೊದಲು ರಾಜ್ಯದ ಭದ್ರತಾ ವ್ಯವಸ್ಥೆಯ ಅವಲೋಕನ ಸಭೆ ನಡೆಸಿದ್ದ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಭದ್ರತೆ ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದರು. ಈ ಸಭೆಯ ಬಗ್ಗೆ ರಾಜ್ಯಪಾಲ ಮಲೀಕ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ವಿಧಾನಸಭೆ ವಿಸರ್ಜನೆಗೊಂಡಿರುವುದರಿಂದ ಸದ್ಯ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.