ADVERTISEMENT

Puri Rath Yatra | ಪುರಿ ರಥಯಾತ್ರೆ ವೇಳೆ ದಟ್ಟಣೆ: 9 ಮಂದಿ ಸ್ಥಿತಿ ಗಂಭೀರ

ಪಿಟಿಐ
Published 28 ಜೂನ್ 2025, 3:16 IST
Last Updated 28 ಜೂನ್ 2025, 3:16 IST
ರಥಯಾತ್ರೆಯಲ್ಲಿ ಭಾಗಿಯಾಗಿದ್ದ ಭಕ್ತರ ಮೇಲೆ ಅಗ್ನಿಶಾಮಕ ಸಿಬ್ಬಂದಿ ನೀರು ಹಾರಿಸಿದರು –ಪಿಟಿಐ ಚಿತ್ರ
ರಥಯಾತ್ರೆಯಲ್ಲಿ ಭಾಗಿಯಾಗಿದ್ದ ಭಕ್ತರ ಮೇಲೆ ಅಗ್ನಿಶಾಮಕ ಸಿಬ್ಬಂದಿ ನೀರು ಹಾರಿಸಿದರು –ಪಿಟಿಐ ಚಿತ್ರ   

ಪುರಿ : ಐತಿಹಾಸಿಕ ಪುರಿ ಜಗನ್ನಾಥ ದೇಗುಲದ ರಥಯಾತ್ರೆ ವೇಳೆ ಶುಕ್ರವಾರ ಅತಿಯಾದ ಸೆಕೆ ಮತ್ತು ಕಿಕ್ಕಿರಿದ ಜನದಟ್ಟಣೆಯಿಂದಾಗಿ ಸುಮಾರು 625 ಮಂದಿ ಕುಸಿದು ಬಿದ್ದಿದ್ದು, ಅಸ್ವಸ್ಥಗೊಂಡರು ಎಂದು ಅಧಿಕಾರಿಗಳು ತಿಳಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ಸುಮಾರು 70 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಒಂಬತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಜನದಟ್ಟಣೆಯಿಂದಾಗಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರಿಗೆ ವಾಂತಿಯಾದರೆ ಮತ್ತೆ ಕೆಲವರು ನಿಶ್ಯಕ್ತಿಯಿಂದ ಬಳಲಿದ್ದರು. ಹಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ’ ಎಂದು ಪುರಿ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ.ಕಿಶೋರ್‌ ಸತ್ಪತಿ ತಿಳಿಸಿದರು.

ADVERTISEMENT

‘ಲಕ್ಷಾಂತರ ಜನರು ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದರು. ದಟ್ಟಣೆಯಿಂದ ಹೊರಬರಲು ಕೆಲವರು ಯತ್ನಿಸಿದ್ದರಿಂದ ಅಹಿತಕರ ಪರಿಸ್ಥಿತಿಗೆ ಕಾರಣವಾಯಿತು’ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

ದಟ್ಟಣೆಯ ಪರಿಣಾಮ ಬಾಲಭದ್ರ ಸ್ವಾಮಿಯ ರಥ ಮತ್ತು ತಳಧ್ವಜ ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿತ್ತು. ಈ ಪ್ರದೇಶದಲ್ಲಿಯೇ ಹಲವರು ಗಾಯಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಆಡಳಿತದ ಸಿಬ್ಬಂದಿ ಮತ್ತು ಖಾಸಗಿ ಸಂಘ ಸಂಸ್ಥೆಗಳ ಸ್ವಯಂಸೇವಕರು ಇದಕ್ಕೆ ನೆರವಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.