ADVERTISEMENT

ಕೋವಿಡ್‌ ಹಿನ್ನೆಲೆ: ಶೇಕಡ 80ರಷ್ಟು ವೃದ್ಧರಿಗೆ ಆರೋಗ್ಯದ ಆತಂಕ- ಸಮೀಕ್ಷಾ ವರದಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 14:16 IST
Last Updated 14 ಮೇ 2021, 14:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಶೇಕಡ 80ರಷ್ಟು ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಸರ್ಕಾರೇತರ ಸಂಸ್ಥೆ ‘ಏಜ್‌ವೆಲ್‌ ಫೌಂಡೇಷನ್‌’ ಈ ಬಗ್ಗೆ ಸಮೀಕ್ಷೆ ನಡೆಸಿದೆ. ಸಹಾಯವಾಣಿ ಮೂಲಕ ಸುಮಾರು 5 ಸಾವಿರ ಮಂದಿಯ ಜತೆ ಸಮಾಲೋಚನೆ ನಡೆಸಿ ಈ ಬಗ್ಗೆ ವಿಶ್ಲೇಷಣೆ ವರದಿಯನ್ನು ಅದು ಸಿದ್ಧಪಡಿಸಿದೆ.

ಕಳೆದ ಒಂದು ತಿಂಗಳಲ್ಲಿ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಐವರಲ್ಲಿ ನಾಲ್ವರು ಹಿರಿಯ ಜೀವಿಗಳು ತಮ್ಮ ಆರೋಗ್ಯದ ಬಗ್ಗೆ ಆತಂಕವನ್ನು ಬಹಿರಂಗಪಡಿಸಿದ್ದಾರೆ.

ADVERTISEMENT

ಶೇಕಡ 70.2ರಷ್ಟು ವೃದ್ಧರು ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ಶೇಕಡ 63ರಷ್ಟು ಮಂದಿ ಒಂಟಿತನ ಮತ್ತು ಪ್ರತ್ಯೇಕತೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ. ಜತೆಗೆ, ಬದಲಾದ ಜೀವನ ಶೈಲಿ, ನಿರ್ಬಂಧಗಳು ಮತ್ತು ಇತರ ಕಾರಣಗಳಿಂದಲೂ ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ಶೇಕಡ 53ರಷ್ಟು ಮಂದಿ ಹೇಳಿದ್ದಾರೆ.

‘ದೇಶದಲ್ಲಿ ಹೆಚ್ಚಿದ ಕೋವಿಡ್‌–19 ಪ್ರಕರಣಗಳು ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆ ಮೇಲೆ ಹೆಚ್ಚಿದ ಒತ್ತಡದಿಂದ, ವಯಸ್ಸಾದವರು ಹೆಚ್ಚು ಭೀತಿಗೆ ಒಳಗಾಗಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಮತ್ತು ಅಸಮರ್ಪಕ ಚಿಕಿತ್ಸೆ ಬಗ್ಗೆಯೂ ಅವರಿಗೆ ಆತಂಕ ಉಂಟಾಗಿದೆ’ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

‘ಕೋವಿಡ್‌–19ನಿಂದಾಗಿ ಬಹುತೇಕ ಹಿರಿಯ ಜೀವಿಗಳ ಶಾಂತಿ, ನೆಮ್ಮದಿ ಹಾಳಾಗಿದೆ. ಕೌನ್ಸೆಲಿಂಗ್‌ ರೂಪದಲ್ಲಿ ಅವರಿಗೆ ನೆರವು ಅಗತ್ಯವಾಗಿದೆ. ಆರೋಗ್ಯ ರಕ್ಷಣೆಯ ಜತೆಗೆ ಭಾವನಾತ್ಮಕ ಬೆಂಬಲವೂ ಅವರಿಗೆ ಅಗತ್ಯವಾಗಿದೆ’ ಎಂದು ಏಜ್‌ವೆಲ್‌ ಫೌಂಡೇಷನ್‌ನ ಹಿಮಾನ್ಶು ರಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.