ADVERTISEMENT

ಹಣ ಅಕ್ರಮ ವರ್ಗಾವಣೆ: ಪಿಎಸಿಎಲ್‌ನ ₹1,986 ಕೋಟಿ ಆಸ್ತಿ ಮುಟ್ಟುಗೋಲು

ಪಿಟಿಐ
Published 26 ಜನವರಿ 2026, 16:02 IST
Last Updated 26 ಜನವರಿ 2026, 16:02 IST
ಇ.ಡಿ
ಇ.ಡಿ   

ನವದೆಹಲಿ: ಚಂಡೀಗಢದ ಪರ್ಲ್ಸ್‌ ಆಗ್ರೋಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸಿಎಲ್‌) ಸಂಸ್ಥೆ ವಿರುದ್ಧದ ₹48,000 ಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣದಡಿ ₹1,986 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. 

ಇದರೊಂದಿಗೆ ಪ್ರಕರಣದಲ್ಲಿ ಈವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯ ಮೌಲ್ಯವು ₹7,589 ಕೋಟಿಗೆ ಏರಿಕೆಯಾಗಿದೆ ಎಂದು ಇ.ಡಿ ಸೋಮವಾರ ತಿಳಿಸಿದೆ. 

ಪಿಎಸಿಎಲ್ ಸಾಮೂಹಿಕ ಹೂಡಿಕೆ ಯೋಜನೆಗಳ ಮೂಲಕ ವಂಚನೆ ಎಸಗಿದೆ. ಕಂಪನಿ ಮತ್ತು ಅದರ ಸಹವರ್ತಿಗಳು, ಕೃಷಿ ಜಮೀನು ಮಾರಾಟ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ದೇಶದಾದ್ಯಂತ ಹೂಡಿಕೆದಾರರಿಂದ ಸುಮಾರು ₹60,000ಕೋಟಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 

ADVERTISEMENT

ಬಹುತೇಕ ಜನರಿಗೆ ಹೂಡಿಕೆಗೆ ಪ್ರತಿಯಾಗಿ ಜಮೀನು ನೀಡದೇ ವಂಚಿಸಲಾಗಿದೆ. ಹೂಡಿಕೆದಾರರಿಗೆ ನೀಡಬೇಕಿದ್ದ ₹48,000 ಕೋಟಿಯನ್ನು ಪಾವತಿಸದೇ ವಂಚಿಸಲಾಗಿದೆ. 

ಪಂಜಾಬ್‌ನ ಲೂಧಿಯಾನ ಹಾಗೂ ರಾಜಸ್ಥಾನದ ಜೈಪುರದಲ್ಲಿರುವ 37 ಸ್ತಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹1,986.48 ಕೋಟಿ. ವಂಚನೆಯಿಂದ ಬಂದ ಹಣದ ಒಂದು ಭಾಗವನ್ನು ಈ ಆಸ್ತಿಗಳನ್ನು ಗಳಿಸಲು ಬಳಸಲಾಗಿದೆ ಎಂದು ಇ.ಡಿ ಹೇಳಿದೆ. 

ಪಿಎಸಿಎಲ್‌ನ ಪ್ರವರ್ತಕ ದಿವಂಗತ ನಿರ್ಮಲ್‌ ಸಿಂಗ್‌ ಭಂಗೂ ಮತ್ತು ಇತರರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಇ.ಡಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಭಂಗೂ ಕಳೆದ ವರ್ಷ ಆಗಸ್ಟ್‌ನಲ್ಲಿ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.