ಸಾವು
(ಪ್ರಾತಿನಿಧಿಕ ಚಿತ್ರ)
ಜಬಲ್ಪುರ (ಮಧ್ಯಪ್ರದೇಶ): ರೋಗಿಗಳಿಂದ ಕೇವಲ ₹20 ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿದ್ದ, ಪದ್ಮಶ್ರೀ ಪುರಸ್ಕೃತ ಡಾ.ಮುನೀಶ್ವರ್ ಚಂದ್ರ ದಾವರ್ (79) ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮೃತಪಟ್ಟರು.
ಗುಪ್ತೇಶ್ವರ ಮುಕ್ತಿಧಾಮದಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಿತು. ಸಹ ವೈದ್ಯರು ಹಾಗೂ ದಾವರ್ ಅವರಿಂದ ಚಿಕಿತ್ಸೆ ಪಡೆದಿದ್ದ ಅನೇಕರು ಪಾಲ್ಗೊಂಡಿದ್ದರು.
1946ರ ಜನವರಿ 16ರಂದು ಪಾಕಿಸ್ತಾನ ಪ್ರಾಂತ್ಯದ ಪಂಜಾಬ್‌ನಲ್ಲಿ ಜನಿಸಿದ ದಾವರ್, ದೇಶ ವಿಭಜನೆ ಸಂದರ್ಭ ಅವರ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಿತ್ತು. 1967ರಲ್ಲಿ ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ಭಾರತ– ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಸುಮಾರು ಒಂದು ವರ್ಷ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಜಬಲ್ಪುರಕ್ಕೆ ಮರಳಿದ ಬಳಿಕ 1972ರಲ್ಲಿ ವೈದ್ಯಕೀಯ ಅಭ್ಯಾಸ ಪ್ರಾರಂಭಿಸಿ, ಕೇವಲ ₹2ಕ್ಕೆ ಚಿಕಿತ್ಸೆ ನೀಡಲಾರಂಭಿಸಿದ್ದರು. ಬಳಿಕ, ₹5, ₹10, ₹15 ಹಾಗೂ ₹20ರವರೆಗೆ ಶುಲ್ಕ ಏರಿಸಿದ್ದರು. ಇವರ ಸಾಧನೆಗೆ 2023ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.