ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನ ಸಭೆಯಲ್ಲಿ ಭಾವುಕ ಭಾಷಣ ಮಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಪಹಲ್ಗಾಮ್ ದಾಳಿಗೆ ಸಾರ್ವಜನಿಕರು ತೋರಿರುವ ಪ್ರತಿಕ್ರಿಯೆಯು ಭಯೋತ್ಪಾದನೆ ವಿರುದ್ಧ ಈ ಪ್ರದೇಶದಲ್ಲಿ ನಡೆಯುತ್ತಿರುವ ಸುದೀರ್ಘ ಹೋರಾಟದ ಐತಿಹಾಸಿಕ ತಿರುವು’ ಎಂದು ಬಣ್ಣಿಸಿದ್ದಾರೆ.
ಉಗ್ರರ ದಾಳಿಯನ್ನು ಖಂಡಿಸಿ ನಿರ್ಣಯ ಕೈಗೊಳ್ಳಲು ಕರೆದಿದ್ದ ವಿಶೇಷ ಅಧಿವೇಶನ ದಲ್ಲಿ ಮಾತನಾಡಿದ ಅವರು, ‘ಕಾಶ್ಮೀರದಾದ್ಯಂತ ಜನರು ದುಃಖವನ್ನು ಸ್ವಯಂಪ್ರೇರಿತರಾಗಿ ವ್ಯಕ್ತಪಡಿಸಿರುವುದು ಭಯೋತ್ಪಾದನೆಯ ಅಂತ್ಯದ ಆರಂಭವನ್ನು ಸೂಚಿಸುತ್ತದೆ’ ಎಂದಿದ್ದಾರೆ.
‘ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರದ ಸಾಮಾನ್ಯ ಜನರು ರಾಜಕೀಯ ಪಕ್ಷಗಳ ಮನವಿ ಅಥವಾ ಸರ್ಕಾರದ ಸೂಚನೆಯಿಲ್ಲದೆಯೇ, ಹಿಂಸೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಮೊಂಬತ್ತಿ ಬೆಳಗಿಸಿ, ಮೌನ ಮೆರವಣಿಗೆ ನಡೆಸುವ ಮೂಲಕ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಾದ್ಯಂತ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ಉಗ್ರರ ದಾಳಿಗೆ ಬಲಿಯಾದವರಿಗಾಗಿ ಇದೇ ಮೊದಲ ಬಾರಿಗೆ ಶ್ರೀನಗರದ ಜಾಮಿಯಾ ಮಸೀದಿ ಮತ್ತು ಇತರ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಮೊದಲು ಎರಡು ನಿಮಿಷಗಳ ಮೌನ ಆಚರಿಸಲಾಯಿತು ಎಂದರು.
ದಾಳಿಯ ಬಳಿಕ ತಾವು ಪೊಲೀಸ್ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ್ದನ್ನು ನೆನಪಿಸಿದ ಅಬ್ದುಲ್ಲಾ, ‘ಶಾಂತಿ, ಸಂತಸವನ್ನು ಹುಡುಕಿಕೊಂಡು ಬಂದವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು’ ಎಂದು ಭಾವುಕರಾಗಿ ತಿಳಿಸಿದರು.
ಉಗ್ರರ ದಾಳಿಯಿಂದ ಹಲವು ಪ್ರವಾಸಿ ಗರನ್ನು ರಕ್ಷಿಸಿದ ಯುವಕರು, ಪ್ರವಾಸಿ ತಾಣದಲ್ಲಿ ದಿಕ್ಕು ತೋಚದೆ ನಿಂತಿದ್ದವರಿಗೆ ಹಣ್ಣುಗಳನ್ನು ನೀಡಿದ ಅಂಬಿಗರು ಮತ್ತು ಯಾವುದೇ ಹಣ ಪಡೆಯದೆ ತಮ್ಮ ಮನೆಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕಾಶ್ಮೀರಿಗಳ ಬಗ್ಗೆಯೂ ಅವರು ಮಾತನಾಡಿದರು.
‘ಕಾಶ್ಮೀರದ ನಿಜವಾದ ಚೈತನ್ಯ ಇದೇ ಆಗಿದೆ. ಇಲ್ಲಿನ ಜನರ ಅತಿಥಿ ಸತ್ಕಾರ, ಧೈರ್ಯ ಮತ್ತು ಪರೋಪಕಾರವನ್ನು ಹಿಂಸೆಯಿಂದ ನಾಶಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಉಗ್ರರ ದಾಳಿಯನ್ನು ಖಂಡಿಸುವ ಮತ್ತು ಸಂತ್ರಸ್ತರು ಹಾಗೂ ಅವರ ಕುಟುಂಬಗಳ ಪರ ಒಗ್ಗಟ್ಟು ತೋರುವ ನಿರ್ಣಯವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳ ಕ್ಷಮೆಯಾಚಿಸು ವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ. ಕ್ಷಮೆ ಕೇಳಲು ನನ್ನಲ್ಲಿ ಪದಗಳಿಲ್ಲ.ಒಮರ್ ಅಬ್ದುಲ್ಲಾ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.