ನವದೆಹಲಿ: ‘ಜುಲೈ 21ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಮತ್ತು ಚೀನಾದ ಬಗೆಗಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬಗ್ಗೆ ಚರ್ಚೆಗೆ ಕನಿಷ್ಠ ಎರಡು ದಿನವಾದರೂ ಅವಕಾಶ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದರು.
‘ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್) ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ಈ ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಬೇಕು‘ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು ಮಹತ್ವದ ಹೇಳಿಕೆಗಳನ್ನು ನೀಡಿದ್ದು ಈ ಬಗ್ಗೆಯೂ ಚರ್ಚೆ ನಡೆಯಬೇಕು. ಚೀನಾದ ವಿಚಾರವೂ ಮಹತ್ವದ್ದಾಗಿದೆ. ಈಗ ‘ಮೇಕ್ ಇನ್ ಇಂಡಿಯಾ’ವು ‘ಮೇಡ್ ಇನ್ ಚೈನಾ’ ಮೇಲೆ ಅವಲಂಬಿತವಾಗಿದೆ. ಈ ಎಲ್ಲ ವಿಚಾರಗಳನ್ನು ಚರ್ಚೆಗೆ ಒಳಪಡಿಸಬೇಕು’ ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
‘ಸಂಸತ್ತಿನಲ್ಲಿ ಒಮ್ಮತ ಮೂಡಿಸಿ, ರಾಜಮಾರ್ಗ ರೂಪಿಸುವುದು ಸರ್ಕಾರದ ಕೆಲಸ. ಆದರೆ, ಕಳೆದ 11 ವರ್ಷಗಳಲ್ಲಿ ಇಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಬದಲಿಗೆ ಪ್ರಧಾನಿ ಮೋದಿ ಅವರು ತಮ್ಮದೇ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ’ ಎಂದು ಹೇಳಿದರು.
ಇಂದು ಇಂಡಿಯಾ ಕೂಟದ ಸಭೆ:
ಮುಂಗಾರು ಅಧಿವೇಶನಕ್ಕೆ ಸಂಬಂಧಿಸಿದಂತೆ ‘ಇಂಡಿಯಾ’ ಕೂಟದ ಮಿತ್ರಪಕ್ಷಗಳು ಶನಿವಾರ ಆನ್‌ಲೈನ್ ಮೂಲಕ ಸಭೆ ನಡೆಸಲಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.