ಲಖನೌ: ‘ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು ಹತರಾದವರ ಧರ್ಮ ಕೇಳಿದ್ದರೆ ಹೊರತು ಜಾತಿಯನ್ನಲ್ಲ’ ಎಂಬ ಪೋಸ್ಟರ್‌ಗಳನ್ನು ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು ಎನ್ನಲಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
‘ಧರ್ಮ ಪೂಛಾ, ಜಾತಿ ನಹಿ..ಯಾದ್ ರಖೆಂಗೆ’(ಅವರು ಧರ್ಮವನ್ನು ಕೇಳಿದ್ದಾರೆ, ಜಾತಿಯನ್ನಲ್ಲ... ನೆನಪಿನಲ್ಲಿಟ್ಟುಕೊಳ್ಳುತ್ತೇವೆ) ಎಂಬ ಪೋಸ್ಟರ್‌ಅನ್ನು ಬಿಜೆಪಿಯ ಛತ್ತೀಸಗಢ ಘಟಕವು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ ಎನ್ನಲಾಗುತ್ತಿದೆ.
‘ತಾನೊಂದು ಸಂವೇದನಾರಹಿತ ಪಕ್ಷ ಎಂಬುದನ್ನು ಬಿಜೆಪಿ ಸಾಬೀತು ಮಾಡಿದೆ. ಪಕ್ಷದ ಈ ಪಾಪಕ್ಕಾಗಿ, ಅದರ ಕಟ್ಟಾ ಬೆಂಬಲಿಗರು ಕೂಡ ಬಿಜೆಪಿಯನ್ನು ಕ್ಷಮಿಸಲಾರರು. ಸಂಕಷ್ಟದ ಸಂದರ್ಭಗಳೆಲ್ಲೆಲ್ಲಾ ತನ್ನ ರಾಜಕೀಯ ಲಾಭವನ್ನೇ ಬಿಜೆಪಿ ಹುಡುಕುತ್ತಿರುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಜನರು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂದು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಬಯಸುತ್ತವೆ. ಹೀಗಿರುವಾಗ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಅವರು ಸೂಕ್ತ ಭದ್ರತೆಯನ್ನು ಏಕೆ ಕೈಗೊಳ್ಳಲಿಲ್ಲ. ಇದು ರಾಜಕೀಯ ವೈಫಲ್ಯವೂ ಆಗಿದೆ’ ಎಂದು ಟೀಕಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯು ಕೇಂದ್ರ ಸರ್ಕಾರದ ವೈಫಲ್ಯ ತೋರಿಸುತ್ತದೆ. ಕೇಂದ್ರ ಜಾಗೃತವಾಗಿದ್ದಲ್ಲಿ ಈ ದಾಳಿಯನ್ನು ತಪ್ಪಿಸಬಹುದಿತ್ತುಅಖಿಲೇಶ್ ಯಾದವ್ ಎಸ್‌ಪಿ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.