ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕೆಂದು ಕರೆ ನೀಡಿರುವ ಕಾಂಗ್ರೆಸ್, 2008ರಲ್ಲಿ ಮುಂಬೈ ದಾಳಿಯ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನಡೆಸಿದ ಸುದ್ದಿಗೋಷ್ಠಿ ಮತ್ತು ಯುಪಿಎ ಸರ್ಕಾರದ ವಿರುದ್ಧ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮುಂಬೈ ದಾಳಿ ಕುರಿತು ಪ್ರಕಟವಾದ ಸುದ್ದಿ ಮತ್ತು ಅದೇ ಪುಟದಲ್ಲಿ ಬಿಜೆಪಿ ನೀಡಿದ್ದ ಜಾಹೀರಾತಿನ ಫೋಟೊವನ್ನು ಹಂಚಿಕೊಂಡಿದ್ದಾರೆ.
ಏ.22ರಂದು ಕಾಂಗ್ರೆಸ್ ಸರ್ವಪಕ್ಷಗಳ ಸಭೆ ಕರೆದಿತ್ತು. ಆದರೆ ಎರಡು ದಿನಗಳ ಬಳಿಕ ಸಭೆ ನಡೆಯಿತು. ಆದರೆ ಸಭೆಗೆ ಪ್ರಧಾನ ಮಂತ್ರಿಯವರು ಗೈರಾಗಿದ್ದರು. ಕಾಂಗ್ರೆಸ್ ಸೇರಿ ಇತರ ಪಕ್ಷಗಳು ಪಹಲ್ಗಾಮ್ ಘಟನೆಯ ಕುರಿತು ಚರ್ಚೆ ನಡೆಸಲು ಸಂಸತ್‌ನ ವಿಶೇಷ ಅಧಿವೇಶನಕ್ಕೆ ಕರೆ ನೀಡಿತು ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ 2008ರ ನ.28 ರಂದು, ಮುಂಬೈನಲ್ಲಿ ದಾಳಿ ನಡೆದ ಕೇವಲ ಎರಡು ದಿನಗಳಲ್ಲಿ ಬಿಜೆಪಿ ಏನು ಮಾಡಿತು? ಗುಜರಾತ್ ಮುಖ್ಯಮಂತ್ರಿ ಮುಂಬೈಗೆ ಹೋಗಿ ಸುದ್ದಿಗೊಷ್ಠಿ ನಡೆಸಿದರು. ಪ್ರತಿದಿನ ಪತ್ರಿಕೆಗಳಲ್ಲಿ ‘ಕ್ರೂರ ಭಯೋತ್ಪಾದಕ ದಾಳಿಗಳು, ದುರ್ಬಲ, ಅಸಮರ್ಥ ಸರ್ಕಾರ, ಉಗ್ರರ ವಿರುದ್ಧದ ಹೋರಾಡಿ, ಬಿಜೆಪಿಗೆ ಮತ ಹಾಕಿ’ ಎನ್ನುವ ಜಾಹೀರಾತು ನೀಡುತ್ತಿತ್ತು. ಇದು ಇತಿಹಾಸ. ಈ ಅತ್ಯಂತ ಸೂಕ್ಷ್ಮ ಸಮಯದಲ್ಲಿ ನಾವು ಒಗ್ಗಟ್ಟಿನಿಂದ ಇರೋಣ. ದೇಶ ಪ್ರತೀಕಾರದ ನಿರೀಕ್ಷೆಯಲ್ಲಿದೆ’ ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ, ಪ್ರಧಾನಿ ಮೋದಿ ಅವರನ್ನೇ ಹೋಲುವಂತಹ, ಮುಖವಿಲ್ಲದ, ಕುರ್ತಾ, ಪೈಜಾಮಾ ತೊಟ್ಟಿರುವ ಹಾಗೂ ಕಪ್ಪು ಬಣ್ಣದ ಶೂ ಧರಿಸಿರುವ ಚಿತ್ರದಲ್ಲಿ ಗಾಯಬ್(ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹೊಣೆಗಾರಿಕೆ ಸಮಯದಲ್ಲಿ ಮಾಯವಾಗುತ್ತಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.