ಶ್ರೀನಗರ: ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆಗೈದ ಉಗ್ರರಿಗಾಗಿ ಭದ್ರತಾ ಪಡೆಗಳು ಕಳೆದು ಐದು ದಿನಗಳಿಂದ ತೀವ್ರ ಶೋಧ ನಡೆಸುತ್ತಿವೆಯಾದರೂ, ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ನಡುವೆ, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡಿರುವ ಮತ್ತು ಆಂತರಿಕವಾಗಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿರುವುದರಿಂದ ಜಮ್ಮು ಮತ್ತು ಕಾಶ್ಮೀರವು ಹೊಸ ಸಂಘರ್ಷವೊಂದರ ಅಂಚಿನಲ್ಲಿ ಬಂದು ನಿಂತಿದೆ.
ಉಗ್ರರ ಮನೆಗಳ ಧ್ವಂಸ ಮತ್ತು ಶಂಕಿತರ ಬಂಧನ ಸೇರಿದಂತೆ ಕಣಿವೆಯಾದ್ಯಂತ ವ್ಯಾಪಕ ಶೋಧ ಕಾರ್ಯಾಚರಣೆ ನಡೆದಿದೆಯಾದರೂ, ರಕ್ತಪಾತಕ್ಕೆ ಕಾರಣರಾದ ಭಯೋತ್ಪಾದಕರ ಪತ್ತೆ ಸಾಧ್ಯವಾಗಿಲ್ಲ. ಕಡಿದಾದ ಭೂಪ್ರದೇಶ ಮತ್ತು ದಾಳಿಕೋರರಿಗೆ ಮಾಹಿತಿ ನೀಡುವ ಜಾಲ ಸ್ಥಳೀಯವಾಗಿ ಸಕ್ರಿಯವಾಗಿರುವುದು ಪತ್ತೆ ಕಾರ್ಯವನ್ನು ಜಟಿಲವಾಗಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೇಂದ್ರ ಗೃಹ ಸಚಿವಾಲಯವು ಪಹಲ್ಗಾಮ್ ದಾಳಿಯ ತನಿಖೆಯನ್ನು ಭಾನುವಾರ ಔಪಚಾರಿಕವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಿದೆ. ಏ.22ರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಭಯೋತ್ಪಾದಕರ ರೇಖಾಚಿತ್ರ ಮತ್ತು ಗುರುತನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸ್ಥಳೀಯ ಉಗ್ರ ಆದಿಲ್ ಹುಸೇನ್ ಠೋಕರ್ ಮತ್ತು ಪಾಕಿಸ್ತಾನದ ಪ್ರಜೆಗಳಾಗಿರುವ ಅಲಿ ಭಾಯಿ ಅಲಿಯಾಸ್ ತಲ್ಹಾ ಭಾಯಿ ಹಾಗೂ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಭದ್ರತಾ ಪಡೆಗಳು ಕಳೆದ ಕೆಲ ದಿನಗಳಲ್ಲಿ ಆದಿಲ್ ಠೋಕರ್ ಸೇರಿದಂತೆ ಹಲವು ಉಗ್ರರ ಮನೆಗಳನ್ನು ಧ್ವಂಸಗೊಳಿಸಿವೆ. ಉಗ್ರರಿಗೆ ಸಹಕಾರ ನೀಡಿದ ಆರೋಪದಲ್ಲಿ ನೂರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿವೆ. ಲಷ್ಕರ್–ಎ–ತಯಬಾ, ಜೈಷ್–ಎ–ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳಿಗೆ ಸೇರಿದ 14 ಉಗ್ರರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅವರ ವಿರುದ್ಧವೂ ಕಾರ್ಯಾಚರಣೆಗೆ ಮುಂದಾಗಿವೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನ ಸೇನೆಯು 2021ರ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಕಳೆದ ಐದು ದಿನಗಳಲ್ಲಿ ಹಲವು ಸಲ ಗುಂಡಿನ ದಾಳಿ ನಡೆಸಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಎಲ್‌ಒಸಿಯುದ್ದಕ್ಕೂ ನಡೆಯುತ್ತಿರುವ ನಿರಂತರ ಗುಂಡಿನ ದಾಳಿ, ದೊಡ್ಡ ಪ್ರಮಾಣದ ಸಂಘರ್ಷಕ್ಕೆ ಹಾದಿಯೊದಗಿಸುವ ಆತಂಕವನ್ನು ಹುಟ್ಟುಹಾಕಿದೆ.
ಭೂಗತ ಬಂಕರ್‌ಗಳನ್ನು ಸಜ್ಜಾಗಿರಿಸುವಂತೆ ಮತ್ತು ಬೆಳೆ ಕೊಯ್ಲು ಕೆಲಸವನ್ನು ತ್ವರಿತಗೊಳಿಸುವಂತೆ ಎಲ್‌ಒಸಿ ಬಳಿಯ ಗ್ರಾಮಗಳ ನಿವಾಸಿಗಳಿಗೆ ಭದ್ರತಾ ಪಡೆಗಳು ಸೂಚಿಸಿವೆ.
‘ಮುಂದೆ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಶೆಲ್ ದಾಳಿ ಪ್ರಾರಂಭವಾದರೆ ಜೀವ ಉಳಿಸಿಕೊಳ್ಳಲು ನಾವು ಬಂಕರ್‌ಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ’ ಎಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ನಿವಾಸಿ ರಂಜಾನ್ ಚೆಚಿ ಹೇಳಿದರು.
ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿರುವಂತೆಯೇ, ಕಣಿವೆಯಾದ್ಯಂತ ಆತಂಕವೂ ಹೆಚ್ಚುತ್ತಿದೆ. ಈ ಋತುವಿನಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದ ಪ್ರವಾಸಿಗರ ಸಂಖ್ಯೆ, ಹಠಾತ್ ಆಗಿ ಕುಸಿದಿದೆ. ಇದು ಸ್ಥಳೀಯ ಆರ್ಥಿಕತೆಗೆ ಬಲವಾದ ಪ್ರಹಾರ ನೀಡಿದೆ.
ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿರುವುದಾಗಿ ನಾನು ಭಾವಿಸುತ್ತೇನೆ. ದೇಶದ ಏಕತೆ ಮತ್ತು 140 ಕೋಟಿ ಜನರ ಒಗ್ಗಟ್ಟು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಏಕತೆಯೇ ನಮ್ಮ ನಿರ್ಣಾಯಕ ಹೋರಾಟದ ತಳಹದಿಯೂ ಹೌದು.ನರೇಂದ್ರ ಮೋದಿ, ಪ್ರಧಾನಿ, (ಮನದ ಮಾತು ಕಾರ್ಯಕ್ರಮದಲ್ಲಿ)
ತನಿಖೆ ಆರಂಭಿಸಿದ ಎನ್ಐಎ
ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ಭಾನುವಾರ ಔಪಚಾರಿಕವಾಗಿ ಆರಂಭಿಸಿದೆ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದ ನಂತರ ಬೆಳವಣಿಗೆ ನಡೆದಿದೆ. ಈಚೆಗಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರನ್ನು ಮಟ್ಟಹಾಕುವ ಶಪಥ ಮಾಡಿದೆ.
ದಾಳಿ ನಡೆದ ಸ್ಥಳದಲ್ಲಿ ಬುಧವಾರದಿಂದಲೇ ಮೊಕ್ಕಾಂ ಹೂಡಿರುವ ಎನ್‌ಐಎ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆಹಾಕುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದಾರೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಐಜಿ ಡಿಐಜಿ ಮತ್ತು ಎಸ್‌ಪಿ ಸೇರಿದಂತೆ ಎನ್‌ಐಎ ಹಿರಿಯ ಅಧಿಕಾರಿಗಳು ತನಿಖೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಾರೆ.
ಈಗಾಗಲೇ ಹಲವು ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸಿ ಮಾಹಿತಿ ಕಲೆಹಾಕಿದ್ದಾರೆ. ಎನ್‌ಐಎ ಅಧಿಕಾರಿಗಳ ಜತೆಯಲ್ಲೇ ವಿಧಿವಿಜ್ಞಾನ ತಜ್ಞರು ಮತ್ತು ತಾಂತ್ರಿಕ ತಜ್ಞರು ಭೌತಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕಲು ಶ್ರಮಿಸುತ್ತಿದ್ದಾರೆ.
ದಾಳಿಕೋರರು ಪ್ರವಾಸಿ ತಾಣಕ್ಕೆ ಹೇಗೆ ನುಸುಳಿದರು ಮತ್ತು ಹತ್ಯಾಕಾಂಡ ನಡೆಸಿದ ಬಳಿಕ ಪಲಾಯನ ಮಾಡಲು ಹೇಗೆ ಯಶಸ್ವಿಯಾದರು ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಹಾದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.