ADVERTISEMENT

ಭಾರತ, ಪಾಕ್‌ ನಡುವೆ ಉದ್ವಿಗ್ನತೆ; ನೌಕಾಪಡೆಯಿಂದ ಕ್ಷಿಪಣಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 24 ಏಪ್ರಿಲ್ 2025, 15:43 IST
Last Updated 24 ಏಪ್ರಿಲ್ 2025, 15:43 IST
   

ಮುಂಬೈ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮನೆ ಮಾಡಿದೆ. ಇದರ ಬೆನ್ನಲ್ಲೇ, ಭಾರತೀಯ ನೌಕಾಪಡೆ ‘ಹೈ ಅಲರ್ಟ್‌’ಘೋಷಿಸಿದ್ದು, ಗುರುವಾರ ತಾಲೀಮು ಆರಂಭಿಸಿದೆ.

ದೇಶೀಯವಾಗಿ ನಿರ್ಮಿಸಲಾದ, ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷೆಯನ್ನು ಯುದ್ಧನೌಕೆ ‘ಐಎನ್‌ಎಸ್‌ ಸೂರತ್‌’ನಿಂದ ಅರಬ್ಬಿ ಸಮುದ್ರದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ನೌಕಾಪಡೆಯ ವೆಸ್ಟರ್ನ್ ನಾವಲ್ ಕಮಾಂಡ್‌ನ ಮೂಲಗಳು ಹೇಳಿವೆ.

ವೆಸ್ಟರ್ನ್ ನಾವಲ್ ಕಮಾಂಡ್‌, ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದೆ.

ADVERTISEMENT

ರಹಸ್ಯವಾಗಿ ಕಾರ್ಯಾಚರಣೆ ನಡೆಸಿ, ಶತ್ರುರಾಷ್ಟ್ರಗಳ ಗುರಿಯನ್ನು ಧ್ವಂಸ ಮಾಡುವ ‘ಐಎನ್‌ಎಸ್‌ ಸೂರತ್’, ‘ಪ್ರಾಜೆಕ್ಟ್‌ 15ಬಿ’ ವರ್ಗದ ನಾಲ್ಕು ಮತ್ತು ಕೊನೆಯ ಯುದ್ಧನೌಕೆಯಾಗಿದೆ.

‘ಐಎನ್‌ಎಸ್‌ ಸೂರತ್, ದೇಶೀಯವಾಗಿ ಯುದ್ಧನೌಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ಕಾರ್ಯಾಚರಣೆಯಲ್ಲಿ ಭಾರತವು ತನ್ನ ಸಾಮರ್ಥ್ಯ ವೃದ್ಧಿಸಿಕೊಂಡಿರುವುದನ್ನು ತೋರಿಸುತ್ತದೆ’ ಎಂದು ವೆಸ್ಟರ್ನ್ ನಾವಲ್ ಕಮಾಂಡ್‌ನ ಅಧಿಕಾರಿಗಳು ಹೇಳಿದ್ದಾರೆ.

ಐಎನ್‌ಎಸ್‌ ಸೂರತ್‌ ವೈಶಿಷ್ಟ್ಯಗಳು

  • ಅತ್ಯಾಧುನಿಕ ‘ಬ್ರಹ್ಮೋಸ್’ ಹಾಗೂ ‘ಬರಾಕ್–8’ ಕ್ಷಿಪಣಿಗಳಿಂದ ಸಜ್ಜಿತ

  • ಜಲಾಂತರ್ಗಾಮಿ ನಿರೋಧಕ ಆಯುಧಗಳು ಹಾಗೂ ಸಂವೇದಕಗಳನ್ನು ಅಳವಡಿಸಲಾಗಿದೆ. ಪ್ರಮುಖವಾಗಿ ಸೋನಾರ್ ಹಮ್‌ಸಾ ಎನ್‌ಜಿ ಟಾರ್ಪೆಡೊ ಟ್ಯೂಬ್‌ ಲಾಂಚರ್‌ಗಳು ಎಎಸ್‌ಡಬ್ಲ್ಯು ರಾಕೆಟ್‌ ಲಾಂಚರ್‌ಗಳನ್ನು ಹೊಂದಿದೆ

  • ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳು ಯುದ್ಧನೌಕೆಗಳು ಹಡಗು ನಿರೋಧಕ ಕ್ಷಿಪಣಿಗಳು ಯುದ್ಧವಿಮಾನಗಳ ದಾಳಿ ಎದುರಿಸುವ ಸಾಮರ್ಥ್ಯ. ಇತರ ಹಡಗುಗಳ ನೆರವು ಇಲ್ಲದೆಯೇ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಬಲ್ಲದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.