ADVERTISEMENT

ಈ ಸಂದರ್ಭದಲ್ಲಿ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನಕ್ಕೆ ಬೇಡಿಕೆ ಇಡಲ್ಲ: ಓಮರ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 9:18 IST
Last Updated 28 ಏಪ್ರಿಲ್ 2025, 9:18 IST
ಓಮರ್ ಅಬ್ದುಲ್ಲಾ
ಓಮರ್ ಅಬ್ದುಲ್ಲಾ   

ಜಮ್ಮು: ಭಯೋತ್ಪಾದಕರ ದಾಳಿಯಲ್ಲಿ 26 ನಾಗರಿಕರು ಹತ್ಯೆಯಾದ ವಿಷಯವನ್ನು ಇಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಯ ವಿಷಯವನ್ನು ಇಟ್ಟುಕೊಂಡು ರಾಜ್ಯದ ಸ್ಥಾನಮಾನ ಕೇಳುವುದು ಕೀಳು ರಾಜಕೀಯವಾಗುತ್ತದೆ ಎಂದಿದ್ಧಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಬೇಕೆಂಬ ಬೇಡಿಕೆ ಇದ್ದೇ ಇದೆ. ಆದರೆ, ದೇಶದ 26 ನಾಗರಿಕರ ಸಾವಿನ ನೋವಿನಲ್ಲಿ ದೇಶ ಮುಳುಗಿರುವ ಈ ಸಂದರ್ಭದಲ್ಲಿ ಅಂತಹ ಒತ್ತಾಯ ಮಾಡುವುದಿಲ್ಲ ಎಂದಿದ್ದಾರೆ.

ADVERTISEMENT

ಭಯೋತ್ಪಾದಕ ದಾಳಿಯಲ್ಲಿ ಮೃತರ ಕುಟುಂಬಗಳಿಗೆ ಹೇಗೆ ಕ್ಷಮೆಯಾಚಿಸುವುದು ಎಂದು ನನಗೆ ತಿಳಿಯುತ್ತಿಲ್ಲ. ಪ್ರವಾಸಿಗರು ಸುರಕ್ಷಿತವಾಗಿ ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಕ್ಷಮೆಯಾಚಿಸಲು ನನ್ನಲ್ಲಿ ಪದಗಳಿಲ್ಲ... ತಂದೆಯನ್ನು ಕಳೆದುಕೊಂಡ ಆ ಮಕ್ಕಳಿಗೆ ಮತ್ತು ಕೆಲವೇ ದಿನಗಳ ಹಿಂದೆ ಮದುವೆಯಾಗಿ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ನಾನು ಏನು ಹೇಳಬೇಕು? ಅವರು ನಮ್ಮ ತಪ್ಪೇನು ಎಂದು ಪ್ರಶ್ನಿಸಿದರು. ಅವರಿಗೆ ಏನೆಂದು ಉತ್ತರಿಸಲಿ? ಎಂದು ಓಮರ್ ಹೇಳಿದ್ದಾರೆ.

‘ಎಂತಹ ಕೆಟ್ಟ ಪರಿಸ್ಥಿತಿಯಲ್ಲೂ ನಾವು ಭರವಸೆಯ ಎಳೆಯನ್ನು ಹುಡುಕಬೇಕು, ಆದರೆ, ಇಂತಹ ಸಂದರ್ಭಗಳಲ್ಲಿ ಅಂತಹ ಬೆಳಕನ್ನು ಹುಡುಕುವುದು ಅತ್ಯಂತ ಕಠಿಣ. 26 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಜನ ಹೊರಗೆ ಬಂದು ಭಯೋತ್ಪಾದಕರ ಕೃತ್ಯವನ್ನು ಖಂಡಿಸುವುದನ್ನು ನೋಡಿದ್ದೇನೆ. ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕಲು ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.