ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಪಾರ್ಥಿವ ಶರೀರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂತಿಮ ನಮನ ಸಲ್ಲಿಸಿದರು
ಪಿಟಿಐ ಚಿತ್ರ
ಕಾನ್ಪುರ: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಕಾನ್ಪುರದ ನವಜೋಡಿ ಭಾರತದ ಸ್ವಿಟ್ಜರ್ಲೆಂಡ್ ಎಂದೇ ಕರೆಯಲಾಗುವ ಕಾಶ್ಮೀರದ ಪಹಲ್ಗಾಮ್‌ಗೆ ತೆರಳಿದ್ದರು. ಒಂದು ರಾತ್ರಿ ಕಳೆದಿದ್ದರೆ ಸಂಭ್ರಮದಿಂದ ವಾಪಾಸಾಗುತ್ತಿದ್ದ ಈ ಕುಟುಂಬ, ಈಗ ಶೋಕಸಾಗರದಲ್ಲಿ ಮುಳುಗಿದೆ.
ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೃತಪಟ್ಟ 26 ಜನರಲ್ಲಿ ಶುಭಂ ದ್ವಿವೇದಿ (31) ಅವರೂ ಒಬ್ಬರು. ಫೆ. 12ರಂದು ವಿವಾಹವಾಗಿದ್ದ ಇವರು ಕಾಶ್ಮೀರದ ಪ್ರವಾಸ ಕೈಗೊಂಡಿದ್ದರು.
ಸಿಮೆಂಟ್ ವ್ಯಾಪಾರಿಯಾಗಿದ್ದ ಇವರು ಏ. 16ರಂದು ಪತ್ನಿ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಈ ಪ್ರದೇಶಕ್ಕೆ ಬಂದಿದ್ದರು. ಇದರಲ್ಲಿ ಅವರ ಪಾಲಕರು, ಸೋದರಿ, ಬಾವ ಮತ್ತು ನಾದಿನಿಯೂ ಇದ್ದರು. ಸೋನಮಾರ್ಗ್ ಮತ್ತು ಗುಲ್‌ಮಾರ್ಗ್ ನೋಡಿಕೊಂಡು ಇವರು ಪಹಲ್ಗಾಮ್‌ಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಮಧ್ಯಾಹ್ನ ಶುಭಂ ಮತ್ತು ಅವರ ಪತ್ನಿ ಕುದುರೆ ಸವಾರಿಗೆ ಅಣಿಯಾದರು. ಇವರ ಕುಟುಂಬದ ಇತರ ಸದಸ್ಯರು ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕುದುರೆ ಸವಾರಿಯಲ್ಲಿದ್ದ ಸಂದರ್ಭದಲ್ಲಿ ಇವರತ್ತ ಬಂದ ಭಯೋತ್ಪಾದಕರು, ಹೆಸರು ಕೇಳಿದರು. ಮರುಕ್ಷಣವೇ ಪತ್ನಿಯ ಎದುರಲ್ಲೇ ಶುಭಂ ತಲೆಗೆ ಗುಂಡಿಕ್ಕಿ ಹತ್ಯೆಗೈದರು ಎಂದು ಕುಟುಂಬ ಸದಸ್ಯರ ಮಾಹಿತಿ ಆಧರಿಸಿ ಕಾನ್ಪುರದಲ್ಲಿರುವ ಶುಭಂ ಚಿಕ್ಕಪ್ಪ ಮನೋಜ್ ದ್ವಿವೇದಿ ತಿಳಿಸಿದ್ದಾರೆ.
‘ಹೆಸರು ಹೇಳಿದ ನಂತರ ಇಸ್ಲಾಮಿಕ್ ಧಾರ್ಮಿಕ ಘೋಷಣೆ ‘ಕಲ್ಮಾ’ ಪಠಿಸುವಂತೆ ಭಯೋತ್ಪಾದಕರು ಹೇಳಿದ್ದಾರೆ. ಅದನ್ನು ಹೇಳದಿದ್ದಾಗ ಶುಭಂ ತಲೆಗೆ ಗುಂಡು ಹಾರಿಸಿದ್ದಾರೆ. ನಂತರ ಶುಭಂ ಪತ್ನಿ ಬಳಿ, ‘ನಿನ್ನ ಪತಿಗೆ ಏನು ಮಾಡಿದೆವು ಎಂಬುದನ್ನು ಹೋಗಿ ನಿಮ್ಮ ಸರ್ಕಾರಕ್ಕೆ ಹೇಳು’ ಎಂದರಂತೆ’ ಎಂದು ಮನೋಜ್ ಹೇಳಿದ್ದಾರೆ.
ಶುಭಂ ಅವರ ಕುಟುಂಬ ಬುಧವಾರ ಬೆಳಿಗ್ಗೆ ಕಾಶ್ಮೀರದಿಂದ ಕಾನ್ಪುರಕ್ಕೆ ಹೊರಡುವುದು ನಿಶ್ಚಯವಾಗಿತ್ತು. ಈಗ ಬದುಕುಳಿದವರು ಕಾನ್ಪುರಕ್ಕೆ ತೆರಳಿದ್ದು, ಶುಭಂ ಪಾರ್ಥಿವ ಶರೀರ ಬರಮಾಡಿಕೊಳ್ಳಲು ದುಃಖತಪ್ತರಾಗಿ ಕಾಯುವಂತಾಗಿದೆ. ದಿನದ ಹಿಂದೆಯಷ್ಟೇ ಸಂಭ್ರಮದಲ್ಲಿದ್ದ ಇವರ ಕುಟುಂಬ ಈಗ ಶೋಕಸಾಗರದಲ್ಲಿ ಮುಳುಗಿದೆ.
ಶುಭಂ ದ್ವಿವೇದಿ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಪೂರ್ವ ಡಿಸಿಪಿ ಶ್ರವಣ ಕುಮಾರ್ ಸಿಂಗ್ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ ಇಬ್ಬರು ವಿದೇಶಿಯರು ಹಾಗೂ ಇಬ್ಬರು ಸ್ಥಳೀಯರು ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.