ADVERTISEMENT

ಪಹಲ್ಗಾಮ್‌ ದಾಳಿಯ 6 ತಿಂಗಳ ಬಳಿಕ ಕಾಶ್ಮೀರದಲ್ಲಿ ಚಿತ್ರೀಕರಣ ಆರಂಭ

ಪಿಟಿಐ
Published 4 ನವೆಂಬರ್ 2025, 12:27 IST
Last Updated 4 ನವೆಂಬರ್ 2025, 12:27 IST
   

ಶ್ರೀನಗರ: ಪಹಲ್ಗಾಮ್‌ ದಾಳಿ ನಡೆದು ಆರು ತಿಂಗಳ ನಂತರ ಕಾಶ್ಮೀರದ ಕಣಿವೆಗಳಲ್ಲಿ ಚಲನಚಿತ್ರ ಚಿತ್ರೀಕರಣವು ನಡೆಯುತ್ತಿದೆ.

ಅನಂತ್‌ನಾಗ್‌ ಜಿಲ್ಲೆಯಲ್ಲಿರುವ ಪಹಲ್ಗಾಮ್‌ನಲ್ಲಿ ಏ.22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಅದರ ಬಳಿಕ ಕಾಶ್ಮೀರದಲ್ಲಿ ಚಲನಚಿತ್ರ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು.

ಪಹಲ್ಗಾಮ್‌ ದಾಳಿ ನಡೆದ ಪ್ರವಾಸಿ ರೆಸಾರ್ಟ್‌ನಲ್ಲಿಯೇ ಜೆಸ್ಸಿ ಖ್ಯಾತಿಯ ವಿಮಲ್‌ ಕೃಷ್ಣ ನಿರ್ದೇಶನದಲ್ಲಿ ಹಾಸ್ಯ ಚಲನಚಿತ್ರವೊಂದರ ಚಿತ್ರೀಕರಣ ಆರಂಭವಾಗಿದೆ.

ADVERTISEMENT

ಈ ಕುರಿತು ಮಾತನಾಡಿರುವ ನಿರ್ದೇಶಕ ವಿಮಲ್‌ ಕೃಷ್ಣ, ‘ನಾವು ಸಿನಿಮಾದ ಚಿತ್ರೀಕರಣಕ್ಕೆ ಸುಂದರ ಸ್ಥಳವನ್ನು ಹುಡುಕುವಾಗ, ಈ ಸ್ಥಳವನ್ನು ಆಯ್ಕೆ ಮಾಡಿದ್ದೆವು. ಕಾಶ್ಮೀರವು ಪ್ರವಾಸಿಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಸಿನಿಮಾ ಚಿತ್ರೀಕರಣಕ್ಕೂ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ಕಾಶ್ಮೀರಿಗಳಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

‘ಪಹಲ್ಗಾಮ್‌ ದಾಳಿ ನಂತರ ಇಲ್ಲಿ ಚಿತ್ರೀಕರಣಕ್ಕೆ ಬಂದವರಲ್ಲಿ ನಾವೇ ಮೊದಲಿಗರು. ಜುಲೈನಲ್ಲಿ ಚಿತ್ರೀಕರಣ ಮಾಡಲು ಸ್ಥಳ ನೋಡಲು ಬಂದಾಗ ಕೂಡ ಯಾವುದೇ ತೊಂದರೆಯಾಗಿರಲಿಲ್ಲ. ಸರ್ಕಾರ, ಸೇನೆ ಕೂಡ ಉತ್ತಮವಾಗಿ ಸ್ಪಂದಿಸಿತ್ತು. ಸ್ಥಳೀಯರು ಕೂಡ ಕುಟುಂಬ ಸದಸ್ಯರಂತೆ ನಮ್ಮನ್ನು ಕಾಣುತ್ತಿದ್ದಾರೆ. ಕಾಶ್ಮೀರವು ಶೇ 100ರಷ್ಟು ಸುರಕ್ಷಿತವಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ನೀಡಿರುವುದು ಕಾಶ್ಮೀರದಲ್ಲಿನ ಪ್ರವಾಸೋದ್ಯಮಕ್ಕೂ ಲಾಭವಾಗಲಿದೆ. ಪಹಲ್ಗಾಮ್‌ನಲ್ಲಿ ಚಿತ್ರೀಕರಣ ಮುಗಿದ ನಂತರ ಶ್ರೀನಗರದಲ್ಲೂ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.