ಆರತಿ
ಚಿತ್ರಕೃಪೆ: ಎಎನ್‌ಐ ಸ್ಕ್ರೀನ್‌ಗ್ರ್ಯಾಬ್
ಕೊಚ್ಚಿ(ಕೇರಳ): 'ಅವರಿಬ್ಬರು ನನ್ನನ್ನು ಸ್ವಂತ ತಂಗಿಯ ಹಾಗೆ ನಡೆಸಿಕೊಂಡರು, ಹಗಲು ರಾತ್ರಿಯೆನ್ನದೆ ನೆರವಿಗೆ ನಿಂತರು...'
ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಕೇರಳದ ಕೊಚ್ಚಿ ಮೂಲದ ಆರತಿ ಮೆನನ್, ಕಾಶ್ಮೀರದ ಸ್ಥಳೀಯರಾದ ಮುಸಾಫಿರ್ ಹಾಗೂ ಸಮೀರ್ ಎಂಬುವವರ ಸಹಕಾರವನ್ನು ಸ್ಮರಿಸುತ್ತ ಗದ್ಗದಿತರಾಗಿದ್ದಾರೆ.
ಕುಟುಂಬ ಸಮೇತ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ಎನ್.ರಾಮಚಂದ್ರನ್ ಕುಟುಂಬ, ಮರಳಿದ್ದು ರಾಮಚಂದ್ರನ್ ಅವರ ಮೃತದೇಹದೊಂದಿಗೆ.
'ಕಾಡಿನ ನಡುವಿನಿಂದ ಗುಂಡಿನ ಸದ್ದು ಕೇಳಿಸಿತು. ಇದು ಉಗ್ರರ ದಾಳಿ ಎಂದು ಮನವರಿಕೆಯಾಯಿತು. ಅಲ್ಲಿದ್ದ ಪ್ರವಾಸಿಗರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದರು. ನಾವೂ ಓಡಿದೆವು. ಓಡುತ್ತಿರುವಾಗಲೇ ಒಬ್ಬ ಉಗ್ರ ಎದುರಾಗಿ ತಡೆದ. ಗಾಳಿಯಲ್ಲಿ ಗುಂಡು ಹಾರಿಸಿದಾಗ ನಾವು ನಲುಗಿದೆವು. ನಾವು ಎರಡು ಗುಂಪುಗಳಾಗಿ ನಿಂತಿದ್ದೆವು. ಅವರು ಒಂದು ಗುಂಪಿನ ಬಳಿ ಹೋಗಿ ಏನನ್ನೋ ಕೇಳಿ, ಬಳಿಕ ಗುಂಡು ಹಾರಿಸಿ ಕೊಲ್ಲುತ್ತಿದ್ದರು. ಕೊನೆಗೆ ನಮ್ಮ ಬಳಿ ಬಂದರು' ಎಂದು ಘಟನೆಯ ಭೀಕರತೆಯನ್ನು ತೆರೆದಿಟ್ಟಿದ್ದಾರೆ.
'ಹಣೆಗೆ ಬಂದೂಕು ಇಟ್ಟರು'
'ಬಳಿಕ ನಮ್ಮನ್ನು ನೆಲದಲ್ಲಿ ಮಲಗುವಂತೆ ಹೇಳಿದ. ನಾವು ಮಲಗಿದೆವು. 'ಕಲಿಮಾ' ಹೇಳುವಂತೆ ಎರಡು ಬಾರಿ ಹೇಳಿದ. ನಮಗೆ ಗೊತ್ತಿಲ್ಲ ಎಂದು ಹೇಳಿದಾಗ, ಅಪ್ಪನಿಗೆ ಗುಂಡಿಕ್ಕಿದ. ನಾನು ಅಪ್ಪನನ್ನು ಅಪ್ಪಿಕೊಳ್ಳಲು ಹೊರಟಾಗ ನನ್ನ ಹಣೆಗೆ ಬಂದೂಕು ಇಟ್ಟ. ನನ್ನ ಮಕ್ಕಳು ಭಯದಿಂದ ಜೋರಾಗಿ ಚೀರಾಡಿದಾಗ ಬಂದೂಕು ತೆಗೆದುಕೊಂಡು ಹೊರಟ' ಎಂದು ಸಾವಿನ ದವಡೆಯಿಂದ ಪಾರಾಗಿ ಬಂದ ಕ್ಷಣವನ್ನು ಆರತಿ ಸ್ಮರಿಸಿದ್ದಾರೆ.
ಕುದುರೆ ಹೆಜ್ಜೆ ಗುರುತು ಹಿಡಿದು...
'ಅಪ್ಪ ಬದುಕಿರಬಹುದೆಂದುಕೊಂಡೆ. ಹಣೆ ಮೇಲೆ ಗುಂಡು ಬಿದ್ದಿದ್ದರಿಂದ ಮೃತಪಟ್ಟಿದ್ದರು. ಜೀವರಕ್ಷಣೆಗಾಗಿ ಮಕ್ಕಳನ್ನು ಹಿಡಿದುಕೊಂಡು ಅಲ್ಲಿಂದ ಓಡಿದೆ. ದಾರಿ ಸಿಗದೆ ಇದ್ದಾಗ ಕೊನೆಗೆ ಕುದುರೆಯ ಹೆಜ್ಜೆಗುರುತು ಅನುಸರಿಸುತ್ತ ಹೋದೆವು. ಅಷ್ಟರಲ್ಲಿ ಸ್ಥಳೀಯರು, ಸರ್ಕಾರಿ ಅಧಿಕಾರಿಗಳು ನೆರವಿಗೆ ಧಾವಿಸಿದರು' ಎಂದಿದ್ದಾರೆ.
'ಶವಾಗಾರದ ಬಳಿಗೆ ನನ್ನನ್ನು ಕರೆದುಕೊಂಡು ಹೋಗಲು ಚಾಲಕ ಮುಸಾಫಿರ್ ಹಾಗೂ ಸಮೀರ್ ನೆರವಾದರು. ರಾತ್ರಿ ಮೂರು ಗಂಟೆಯ ವೇಳೆಗೂ ನಮ್ಮ ಜೊತೆಗಿದ್ದು ನೆರವು ನೀಡಿದರು. ಬೆಳಿಗ್ಗೆ ಆರು ಗಂಟೆಯಾದರೂ ಕೆಲಸ ಕಾರ್ಯಗಳೆಲ್ಲ ಮುಗಿದಿರಲಿಲ್ಲ. ನನ್ನ ತಾಯಿಗೆ ಉಳಿದುಕೊಳ್ಳಲು ಹೋಟೆಲ್ ರೂಮಿನ ವ್ಯವಸ್ಥೆ ಮಾಡಿದರು. ನಾವು ಬುಕ್ ಮಾಡಿರದ ಹೋಟೆಲ್ ನಲ್ಲಿ ಉಚಿತವಾಗಿ ಕೋಣೆ ಕೊಟ್ಟರು. ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುವಾಗ, ಕಾಶ್ಮೀರದಿಂದ ನನಗೆ ನೀವಿಬ್ಬರು ಸಹೋದರರು ಸಿಕ್ಕಿದ್ದೀರಿ, ಅಲ್ಲಾಹು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹೇಳಿ, ಧನ್ಯವಾದ ತಿಳಿಸಿದೆ' ಎಂದು ಆರತಿ ನೆನಪಿಸಿಕೊಂಡಿದ್ದಾರೆ.
ಎನ್.ರಾಮಚಂದ್ರನ್ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12ಕ್ಕೆ ಎಡಪಳ್ಳಿ ರುದ್ರಭೂಮಿಯಲ್ಲಿ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.