ಬಿತನ್ ಅಧಿಕಾರಿ ಕುಟುಂಬ
ಚಿತ್ರ: ಎಕ್ಸ್
ಕೋಲ್ಕತ್ತ: ನಿದ್ದೆಯಿಂದ ಭಯಭೀತನಾಗಿ ಎದ್ದ ಆ ಪುಟ್ಟ ಹುಡುಗ, 'ಅಪ್ಪ ಎಲ್ಲಿ' ಎಂದು ವಿಚಾರಿಸುವಾಗ ಆ ತಾಯಿಯ ಬಳಿ ಕಣ್ಣೀರಿನ ಹೊರತು ಉತ್ತರ ಇರಲಿಲ್ಲ. ಕೆಲ ಕ್ಷಣಗಳ ಹಿಂದಷ್ಟೇ ಅಪ್ಪ ಕಣ್ಣ ಮುಂದೆಯೇ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಟೆಕಿ ಬಿತನ್ ಅಧಿಕಾರಿ(40) ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಪತ್ನಿ, 3 ವರ್ಷದ ಮಗನೊಂದಿಗೆ ರಜಾ ದಿನ ಕಳೆಯಲು ಅಲ್ಲಿಗೆ ತೆರಳಿದ್ದ ಅವರು ಮಗನ ಕಣ್ಣ ಮುಂದೆಯೇ ಕಣ್ಣುಮುಚ್ಚಿದ್ದಾರೆ.
ಪಶ್ಚಿಮ ಬಂಗಾಳದವರಾದ ಬಿತನ್ ಅಧಿಕಾರಿ ಅವರು ಕೆಲ ವರ್ಷಗಳಿಂದ ಕುಟುಂಬ ಸಮೇತ ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿದ್ದರು. ಏಪ್ರಿಲ್ 8ರಂದು ಕೋಲ್ಕತ್ತಕ್ಕೆ ಬಂದಿದ್ದ ಅವರು, ಪೋಷಕರು, ಕುಟುಂಬ ಸದಸ್ಯರನ್ನು ಭೇಟಿಯಾಗಿ ಅಲ್ಲಿಂದ ನೇರವಾಗಿ ಪತ್ನಿ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ತೆರಳಿದ್ದರು.
‘ನಮ್ಮ ಬದುಕನ್ನು ಅವರು ಛಿದ್ರಗೊಳಿಸಿದರು...' ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಬಿತನ್ ಪತ್ನಿ ಆ ದಿನದ ಭೀಕರ ಘಟನೆಯನ್ನು ವಿವರಿಸಿದ್ದಾರೆ.
‘ನೀವು ಎಲ್ಲಿಂದ ಬಂದವರು ಎಂದು ಅವರು(ಉಗ್ರರು) ಕೇಳಿದರು. ನಂತರ ಪುರುಷರನ್ನೆಲ್ಲ ನಮ್ಮಿಂದ ಪ್ರತ್ಯೇಕಿಸಿದರು. ಅವರ ಧರ್ಮವನ್ನು ಕೇಳಿ ಒಬ್ಬೊಬ್ಬರನ್ನೇ ಹೊಡೆದುರುಳಿಸಿದರು. ನನ್ನ ಪತಿ ನನ್ನ ಮಗನ ಮುಂದೆಯೇ ಹತ್ಯೆಯಾದರು. ಅದನ್ನು ನಾನು ಅವನಿಗೆ(ಮಗನಿಗೆ) ಹೇಗೆ ವಿವರಿಸಲಿ?’ ಎಂದು ಕಣ್ಣೀರು ಸುರಿಸಿದ್ದಾರೆ.
‘ಅವರು ನಮ್ಮನ್ನು ಶಾಶ್ವತವಾಗಿ ಬಿಟ್ಟು ಹೋದರು ಎಂದು ನಾನು ನನ್ನ ಮಗನಿಗೆ ಹೇಗೆ ಹೇಳಲಿ? ನಿದ್ದೆ ಹೋದ ಮಗು ಏಕಾಏಕಿ ಭಯದಿಂದ ಎದ್ದು ನನ್ನ ಕೈಹಿಡಿದು, ಅಪ್ಪ ಎಲ್ಲಿ? ಎಂದು ಕೇಳುತ್ತಾನೆ... ನಾನೇನು ಮಾಡಲಿ’ ಎಂದು ಕಣ್ಣೀರು ಹಾಕಿದ್ದಾರೆ.
ವಿದೇಶದಲ್ಲಿದ್ದರೂ ಬಿತನ್ ಅವರು ತಮ್ಮ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಅವರ ದೈನಂದಿನ ವೆಚ್ಚ ಮತ್ತು ವೈದ್ಯಕೀಯ ವೆಚ್ಚವನ್ನು ಅವರೇ ಭರಿಸುತ್ತಿದ್ದರು. ಇದೀಗ ಬಿತನ್ ಅವರ ಅಗಲಿಕೆಯಿಂದ ಇಡೀ ಕುಟುಂಬ ಅನಾಥವಾಗಿದೆ.
‘ನನ್ನ ಪತಿ ಸಾವಿಗೆ ಮಾತ್ರವಲ್ಲ ಆ ದಿನ ಉಗ್ರರಿಂದ ಹತ್ಯೆಯಾದ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ನಾನು ಆಗ್ರಹಿಸುತ್ತೇನೆ' ಎಂದು ಬಿತನ್ ಪತ್ನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.