ADVERTISEMENT

Pahalgam Terror Attack: ಜೈಲಿನಲ್ಲಿರುವ ಉಗ್ರರ ವಿಚಾರಣೆ

ಪಹಲ್ಗಾಮ್‌ ಭಯೋತ್ಪಾದಕ ದಾಳಿ: ತನಿಖೆ ವ್ಯಾಪ್ತಿ ವಿಸ್ತರಿಸಿದ ಎನ್‌ಐಎ

ಝುಲ್ಫೀಕರ್ ಮಜೀದ್
Published 3 ಮೇ 2025, 23:30 IST
Last Updated 3 ಮೇ 2025, 23:30 IST
   

ಶ್ರೀನಗರ: ಪಹಲ್ಗಾಮ್‌ ದಾಳಿಯ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್‌ಐಎ), ಜಮ್ಮು ಜೈಲಿನಲ್ಲಿ ಇರುವ ಇಬ್ಬರು ಉಗ್ರರ ವಿಚಾರಣೆ ನಡೆಸಿದೆ. ಮುಷ್ತಾಕ್ ಮತ್ತು ನಿಸಾರ್ ಎಂಬ ಇಬ್ಬರು ಉಗ್ರರನ್ನು 2023ರಲ್ಲಿ ರಜೌರಿಯಲ್ಲಿ ನಡೆದ ದಾಳಿಯ ಸಂಬಂಧ ಬಂಧಿಸಲಾಗಿದೆ.

ಇಬ್ಬರು ಉಗ್ರರು 2023ರ ಏಪ್ರಿಲ್‌ನಿಂದ ಜೈಲಿನಲ್ಲಿ ಇದ್ದಾರೆ. ರಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಮಂದಿ ನಾಗರಿಕರು ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು. ದಾಳಿಯ ಮಾರನೆಯ ದಿನ ಕಚ್ಚಾ ಬಾಂಬ್‌ ಸ್ಫೋಟ ಸಂಭವಿಸಿತ್ತು.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ಪಹಲ್ಗಾಮ್‌ ದಾಳಿಯ ಬಗ್ಗೆ ಮುಷ್ತಾಕ್ ಮತ್ತು ನಿಸಾರ್‌ಗೆ ಮೊದಲೇ ಗೊತ್ತಿತ್ತು ಅಥವಾ ಆ ದಾಳಿಯ ಯೋಜನೆ ರೂಪಿಸಲು ಅವರಿಬ್ಬರು ನೆರವು ಒದಗಿಸಿದ್ದಾರೆ ಎಂದು ತನಿಖಾಧಿಕಾರಿ ಗಳು ನಂಬಿದ್ದಾರೆ. ದಾಳಿಯ ಹಿಂದಿನ ಭಯೋತ್ಪಾದಕರ ಜಾಲವನ್ನು ಪತ್ತೆಮಾಡುವ ಪ್ರಯತ್ನದ ಭಾಗವಾಗಿ ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಗೊತ್ತಾಗಿದೆ.

ADVERTISEMENT

ತನಿಖೆಯ ಭಾಗವಾಗಿ ಎನ್‌ಐಎ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸೂಕ್ಷ್ಮ ವಲಯ ಎಂದು ಗುರುತಿಸ ಲಾಗಿರುವ ಕೆಲವು ಗಡಿ ಪ್ರದೇಶಗಳ ಮೇಲೆಯೂ ಕಣ್ಣಿರಿಸಿದ್ದಾರೆ. ಆ ಪ್ರದೇಶಗಳ ಮೂಲಕ ಭಯೋತ್ಪಾದಕರು ಒಳನುಸುಳುತ್ತಿರಬಹುದು, ಅಲ್ಲಿ ಶಂಕಿತ ಭಯೋತ್ಪಾದಕರ ಅಡಗುದಾಣಗಳು ಇವೆ ಎನ್ನಲಾಗಿದೆ.

ಪಹಲ್ಗಾಮ್ ದಾಳಿಕೋರರಿಗೆ ನೆರವು ಒದಗಿಸಿದ ಆರೋಪದ ಅಡಿಯಲ್ಲಿ ಅಂದಾಜು 20 ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.

ಕಠಿಣ ಕಾನೂನಾಗಿರುವ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ಯ ಅಡಿಯಲ್ಲಿ 100ಕ್ಕೂ ಹೆಚ್ಚು ಮಂದಿ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಶಂಕಿತರನ್ನು ವಿಚಾರಣೆ ಇಲ್ಲದೆ ಗರಿಷ್ಠ ಎರಡು ವರ್ಷಗಳವರೆಗೆ ವಶದಲ್ಲಿ ಇರಿಸಿಕೊಳ್ಳಲು ಅವಕಾಶ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.