ನವದೆಹಲಿ: ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ಕ್ಕೆ ಗೌರವಾರ್ಥವಾಗಿ ಭೋಜಪುರಿ ಗಾಯಕರೂ ಆಗಿರುವ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ‘ಸಿಂಧೂರ್ ಕಿ ಲಲ್ಕಾರ್’ ಎಂಬ ಹಾಡನ್ನು ಪ್ರಸ್ತುತಪಡಿಸಿದ್ದಾರೆ.
ದೆಹಲಿ ಪೂರ್ವ ಕ್ಷೆತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತಿವಾರಿ ಅವರು ಭಾರತೀಯ ಸೇನೆಯ ಶೌರ್ಯವನ್ನು ಈ ಗೀತೆಯಲ್ಲಿ ಹಾಡಿಹೊಗಳಿದ್ದಾರೆ.
‘ಸೈನಿಕರ ಕುರಿತು ಯಾವ ಗಾಯಕರೂ ಗೀತೆ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡದಿರುವುದು ತೀವ್ರ ಬೇಸರ ತರಿಸಿದೆ. ಹಲವು ಗಾಯಕರು ರಾಜಕೀಯದ ಉದ್ದೇಶದಿಂದ ಹಾಡುತ್ತಾರೆ. ಬಹಳಷ್ಟು ಸಮಯದಲ್ಲಿ ಸರ್ಕಾರದ ವಿರುದ್ಧವಿರುತ್ತದೆ. ರೈತರ ಹೋರಾಟದ ಸಂದರ್ಭದಲ್ಲಿ ಬಹಳಷ್ಟು ಗಾಯಕರು ಗೀತೆಗಳನ್ನು 2021ರಲ್ಲಿ ಮಾಡಿದ್ದರು. ಆದರೆ ಆಪರೇಷನ್ ಸಿಂಧೂರ ಮತ್ತು ಯೋಧರ ಶೌರ್ಯ ಸಾಹಸಗಳ ಕುರಿತು ಯಾರೊಬ್ಬರೂ ಹಾಡು ಮಾಡಲಿಲ್ಲ’ ಎಂದಿದ್ದಾರೆ.
‘5.45 ನಿಮಿಷದ ಸಿಂಧೂರ್ ಕಿ ಲಲ್ಕಾರ್ ಗೀತೆಯನ್ನು ಶೀಘ್ರದಲ್ಲಿ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಈ ಗೀತೆಯು ಭಯೋತ್ಪಾದಕರಿಗೆ ನೆರವಾಗುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆಯ ಶೌರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕುರಿತಾಗಿದೆ’ ಎಂದು ಗೀತೆಯ ಸಂಗೀತ ಸಂಯೋಜಕ ಹಾಗೂ ಗಾಯಕ ತಿವಾರಿ ಹೇಳಿದ್ದಾರೆ. ಈ ಗೀತೆಗೆ ಬಿಜೆಪಿ ಮುಖಂಡ ನೀಲಕಂಠ ಬಕ್ಸಿ ಅವರ ಪರಿಕಲ್ಪನೆ ಇದೆ.
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು. ಮೇ 7ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.