ADVERTISEMENT

Pahalgam Terror Attack: ಸೌದಿ ದೊರೆ, ಬ್ರಿಟನ್ ಪ್ರಧಾನಿ ಖಂಡನೆ

ಪಿಟಿಐ
Published 23 ಏಪ್ರಿಲ್ 2025, 11:02 IST
Last Updated 23 ಏಪ್ರಿಲ್ 2025, 11:02 IST
<div class="paragraphs"><p>ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್‌ ಮತ್ತು&nbsp;ಕೀರ್ ಸ್ಟಾರ್ಮರ್‌</p></div>

ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್‌ ಮತ್ತು ಕೀರ್ ಸ್ಟಾರ್ಮರ್‌

   

ನವದೆಹಲಿ: ಕಾಶ್ಮೀರದ ದಕ್ಷಿಣ ಭಾಗದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಭಯೋತ್ಫಾದಕರು ಮಂಗಳವಾರ ನಡೆಸಿದ ಪೈಶಾಚಿತಕ ಕೃತ್ಯವನ್ನು ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್‌ ಮತ್ತು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್‌ ಕಟು ಪದಗಳಿಂದ ಖಂಡಿಸಿದ್ದಾರೆ.

‘ಮನುಕುಲಕ್ಕೆ ಭಯೋತ್ಪಾದನೆಯು ಬಹುದೊಡ್ಡ ಅಪಾಯವಾಗಿದೆ. ಭಯೋತ್ಪಾದಕರ ಯಾವುದೇ ಕೃತ್ಯಗಳಿಗೆ ಸಮರ್ಥನೆ ಎಂಬುದು ಇಲ್ಲ. ಯಾವುದೇ ನಿರ್ದಿಷ್ಟ ಜನಾಂಗ, ಧರ್ಮ ಅಥವಾ ಸಂಸ್ಕೃತಿಗೆ ಭಯೋತ್ಪಾದನೆಯನ್ನು ತಳುಕು ಹಾಕುವ ಪ್ರಯತ್ನ ಸರಿಯಲ್ಲ. ಭಯೋತ್ಪಾದನೆ ಮತ್ತು ಅದಕ್ಕೆ ಆರ್ಥಿಕ ನೆರವು ನೀಡುವ ಸಂಘಟನೆಗಳನ್ನು ಸದೆಬಡಿಯಲು ಭಾರತದೊಂದಿಗೆ ಸೌದಿ ಅರೇಬಿಯಾ ಸದಾ ಜತೆಯಲ್ಲಿರಲಿದೆ’ ಎಂದಿದ್ದಾರೆ.

ADVERTISEMENT

ಮಂಗಳವಾರ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಯುದ್ಧ ವಿಮಾನಗಳ ಭದ್ರತೆ ಒದಗಿಸಿ ಸ್ವಾಗತ ನೀಡಲಾಗಿತ್ತು. ಪ್ರವಾಸದ ಸಂದರ್ಭದಲ್ಲಿ ಪಹಲ್ಗಾಮ್ ಘಟನೆಯ ಸುದ್ದಿ ತಿಳಿದ ಪ್ರಧಾನಿ ಮೋದಿ, ಸ್ವದೇಶಕ್ಕೆ ವಾಪಾಸಾಗಿದ್ದರು. ಈ ಸಂದರ್ಭದಲ್ಲಿ ಉಭಯ ನಾಯಕರು ಭಯೋತ್ಪಾದನೆ ವಿರುದ್ಧ ಜಂಟಿ ಹೇಳಿಕೆ ನೀಡಿದ್ದರು.

ಇದೊಂದು ಹೇಡಿಗಳ ಕೃತ್ಯ: ಪ್ರಧಾನಿ ಸ್ಟಾರ್ಮರ್‌

ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆಗೈದ ಭಯೋತ್ಪಾದಕರ ಕೃತ್ಯವನ್ನು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್‌ ಖಂಡಿಸಿದ್ದಾರೆ.

‘ಇದೊಂದು ಹೇಡಿಗಳ ಕೃತ್ಯ’ ಎಂದು ಸ್ಟಾರ್ಮರ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಖಂಡಿಸಿದ್ದಾರೆ.

‘ಕಾಶ್ಮೀರದಲ್ಲಿನ ಭಯೋತ್ಪಾದಕರ ಕೃತ್ಯವು ಭಯಾನಕ ಮತ್ತು ವಿನಾಶಕಾರಿಯಾಗಿದೆ. ನೊಂದ ಕುಟುಂಬಗಳಿಗೆ ಮತ್ತು ಸಮಸ್ತ ಭಾರತೀಯರಿಗೆ ನನ್ನ ಸಂತಾಪಗಳು’ ಎಂದಿದ್ದಾರೆ.

ಕಾಮನ್‌ವೆಲ್ತ್ ಕಾರ್ಯದರ್ಶಿ ಶೆರ್ಲಿ ಅಯೊರ್ಕರ್‌ ಬೊಚ್‌ವೇ ಪ್ರತಿಕ್ರಿಯಿಸಿ, ‘ಇಂಥ ಕಠಿಣ ಪರಿಸ್ಥಿತಿಯಲ್ಲಿ ಭಾರತೀಯರೊಂದಿಗೆ ನಾವಿದ್ದೇವೆ. ಇಂದು ನಾವೆಲ್ಲರೂ ಒಂದೇ ನಿರ್ಣಯ ಹೊಂದಿದ್ದೇವೆ. ಕಾಮನ್‌ವೆಲ್ತ್‌ ರಾಷ್ಟ್ರಗಳಾದ ನಮ್ಮಲ್ಲಿರುವ ಶಾಂತಿಯ ಮೌಲ್ಯ, ಎಲ್ಲರನ್ನೂ ಒಳಗೊಳ್ಳುವ ಗುಣ, ತಾಳ್ಮೆ, ಪರಸ್ಪರ ಗೌರವದ ವಿರುದ್ಧ ಭಯೋತ್ಪಾದನೆ ಜಯ ಸಾಧಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.