ADVERTISEMENT

Pahalgam Terror Attack: ಅಮಾಯಕ ಪ್ರವಾಸಿಗರೇ ದಾಳಿಯ ಗುರಿ; ಈವರೆಗಿನ ಬೆಳವಣಿಗೆ

ರಾಯಿಟರ್ಸ್
Published 23 ಏಪ್ರಿಲ್ 2025, 12:18 IST
Last Updated 23 ಏಪ್ರಿಲ್ 2025, 12:18 IST
<div class="paragraphs"><p>ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಭಾರತೀಯ ನೌಕಾದಳದ ಲೆಫ್ಟಿನೆಂಟ್‌ ವಿನಯ್ ನರ್ವಾಲ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ವೇಳೆ ಪತ್ನಿಯ ಆಕ್ರಂದನ</p></div>

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಭಾರತೀಯ ನೌಕಾದಳದ ಲೆಫ್ಟಿನೆಂಟ್‌ ವಿನಯ್ ನರ್ವಾಲ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ವೇಳೆ ಪತ್ನಿಯ ಆಕ್ರಂದನ

   

ಪಿಟಿಐ ಚಿತ್ರ

ನವದೆಹಲಿ: ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನೇ ಗುರಿಯಾಗಿಸಿ ಭಯೋತ್ಪಾದಕರು ಮಂಗಳವಾರ (ಏ. 22) ನಡೆಸಿದ ಗುಂಡಿನ ದಾಳಿಯಲ್ಲಿ 26 ಜನ ಮೃತಪಟ್ಟು, 17 ಜನ ಗಾಯಗೊಂಡಿದ್ದಾರೆ. ಕೃತ್ಯ ಎಸಗಿದವರ ಸದೆಬಡಿಯಲು ಸೇನೆ ಕಾರ್ಯಾಚರಣೆ ಆರಂಭಿಸಿದೆ. 

ADVERTISEMENT

ಘಟನೆ ನಡೆದ ಸ್ಥಳ ಯಾವುದು?

ಬೈಸರನ್‌ ಕಣಿವೆಯು ಕಾಶ್ಮೀರದಲ್ಲಿ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಪ್ರದೇಶವನ್ನು ಮಿನಿ ಸ್ವಿಟರ್ಜಲೆಂಡ್‌ ಎಂದೇ ಕರೆಯಲಾಗುತ್ತದೆ. ದಟ್ಟ ಪೈನ್‌ ಅರಣ್ಯ ಮತ್ತು ಹಸಿರು ಹೊದ್ದ ಈ ಪ್ರದೇಶ ನೋಡುಗರ ಕಣ್ಣಿಗೆ ದೃಶ್ಯಕಾವ್ಯದಂತೆ ಕಾಣಿಸುತ್ತದೆ.

ಈ ಋತುಮಾನದಲ್ಲಿ ಕಾಶ್ಮೀರದತ್ತ ದೇಶ ವಿದೇಶಗಳಿಂದ ಪ್ರವಾಸಿಗರು ಬರುವುದು ಸಾಮಾನ್ಯ. ಭಯೋತ್ಪಾದಕರು ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು ಒಂದು ಸಾವಿರ ಪ್ರವಾಸಿಗರು ಈ ಸ್ಥಳದಲ್ಲಿದ್ದರು.

ದಾಳಿಗೊಳಗಾದವರು ಯಾರು?

ದಾಳಿಗೊಳಗಾದವರಲ್ಲಿ ಬಹುತೇಕರು ಪುರುಷರು. ಇವರಲ್ಲಿ ಭಾರತ ಮತ್ತು ನೇಪಾಳಕ್ಕೆ ಸೇರಿದ ಜನರಿದ್ದಾರೆ.

ದಾಳಿ ನಡೆಸಿದವರು ಯಾರು?

‘ಕಾಶ್ಮೀರ್ ರೆಸಿಸ್ಟೆನ್ಸ್‌’ ಎಂಬ ಸಂಘಟನೆ ಕೃತ್ಯದ ಹೊಣೆ ಹೊತ್ತಿದೆ. ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದು, ಹೊರಗಿನವರು ಬಂದು ಇಲ್ಲಿ ನೆಲೆಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. 

ಕಾಶ್ಮೀರ್ ರೆಸಿಸ್ಟೆನ್ಸ್ ಸಂಘಟನೆಯು ಪಾಕಿಸ್ತಾನ ಮೂಲದ್ದು ಎಂದು ಭಾರತೀಯ ಸೇನೆ ಆರೋಪಿಸಿದೆ. ಭಾರತದ ಆರೋಪವನ್ನು ಪಾಕಿಸ್ತಾನ ಅಲ್ಲಗಳೆದಿದೆ. ಕಾಶ್ಮೀರ ಜನತೆ ಪರವಾಗಿ ನೈತಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನಷ್ಟೇ ಪಾಕಿಸ್ತಾನ ನೀಡುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಸೇನೆಯು ಯಾವ ಕ್ರಮವನ್ನು ಕೈಗೊಂಡಿದೆ?

ಗುಂಡಿನ ದಾಳಿ ನಡೆಸಿದ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಇಂದು (ಬುಧವಾರ) ಬಿಡುಗಡೆಗೊಳಿಸಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಪಾಕಿಸ್ತಾನ ಮೂಲದ ಮೂವರನ್ನು ಆಸೀಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಸರನ್ ಪ್ರದೇಶದತ್ತ ಸಾಕಷ್ಟು ಸಂಖ್ಯೆಯ ಸೈನಿಕರು ಇವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇಂಥ ಕೃತ್ಯ ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಸೌದಿ ಪ್ರವಾಸವನ್ನು ಅವರು ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದಲ್ಲಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದ್ದಾರೆ.

ದಾಳಿಯ ನಂತರ ಪ್ರವಾಸಿಗರ ಪ್ರತಿಕ್ರಿಯೆ ಏನು?

ದಾಳಿಯ ನಂತರ ಕಾಶ್ಮೀರದಲ್ಲಿ ಉಳಿದಿರುವ ಪ್ರವಾಸಿಗರು ಭೀತಿಯಲ್ಲಿದ್ದು, ತಮ್ಮ ಪ್ರವಾಸ ಮೊಟಕುಗೊಳಿಸಿ ತಾಯ್ನಾಡಿಗೆ ತೆರಳಲು ಸಜ್ಜಾಗಿದ್ದಾರೆ. ವಿಮಾನ ಸಂಸ್ಥೆಗಳು ಹೆಚ್ಚುವರಿ ವಿಮಾನಗಳಿಗೆ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.