ಉಗ್ರರ ಸುಳಿವು ನೀಡಿದವರಿಗೆ ₹20ಲಕ್ಷ ನಗದು ಬಹುಮಾನ ಘೋಷಿಸಿದ ಅನಂತ್‌ನಾಗ್ ಪೊಲೀಸರು
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿರುವ ಉಗ್ರರ ಸುಳಿವು ನೀಡಿದವರಿಗೆ ₹20 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದು ಅನಂತ್‌ನಾಗ್ ಜಿಲ್ಲಾ ಪೊಲೀಸರು ಘೋಷಿಸಿದ್ದಾರೆ.
ಈ ಕುರಿತು ಸಾರ್ವಜನಿಕ ಪ್ರಕಟಣೆಯನ್ನು ಕಾಶ್ಮೀರ ವಲಯದ ಅನಂತ್‌ನಾಗ್ ಜಿಲ್ಲಾ ಪೊಲೀಸರು ಪ್ರಕಟಿಸಿದ್ದಾರೆ.
ದಾಳಿಯ ಬಗ್ಗೆ ಯಾವುದೇ ಒಂದು ನಿಖರ ಸಣ್ಣ ಸುಳಿವು ನೀಡಿದರೂ ₹20 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.
ಪಹಲ್ಗಾಮ್ ಪಟ್ಟಣ ಸಮೀಪದ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದರು. 28 ಮಂದಿ ಮೃತಪಟ್ಟು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಪಾತ್ರವಿಲ್ಲ ಎಂದ ಪಾಕ್
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದು ಹೇಳಿರುವ ಪಾಕಿಸ್ತಾನ, ‘ಹಿಂದುತ್ವ ಶಕ್ತಿಗಳಿಂದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ದಂಗೆಗಳ ಪೈಕಿ ಈ ದಾಳಿಯೂ ಒಂದು’ ಎಂದು ಬುಧವಾರ ಹೇಳಿದೆ.
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುವುದಕ್ಕೆ ಭಾರತವು ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳುತ್ತಿದೆ ಎಂದು ತನ್ನ ಆರೋಪವನ್ನು ಪಾಕಿಸ್ತಾನ ಪುನರುಚ್ಚರಿಸಿದೆ.
‘ಭಾರತದ ಅನೇಕ ರಾಜ್ಯಗಳಲ್ಲಿ ಹತ್ತು ಹಲವು ದಂಗೆಗಳು ನಡೆಯುತ್ತಿವೆ. ನಾಗಾಲ್ಯಾಂಡ್‌ನಿಂದ ಹಿಡಿದು ಕಾಶ್ಮೀರದವರೆಗೆ, ಛತ್ತೀಸಗಢ, ಮಣಿಪುರ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರು ದಂಗೆ ಏಳುತ್ತಿದ್ದಾರೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.