ADVERTISEMENT

ವಶದಲ್ಲಿರುವ ಪೈಲಟ್ ಫೋಟೊ ಬಿಡುಗಡೆ: ಪಾಕ್‍ನಿಂದ ಜಿನೀವಾ ಒಪ್ಪಂದ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 16:37 IST
Last Updated 27 ಫೆಬ್ರುವರಿ 2019, 16:37 IST
   

ನವದೆಹಲಿ: ಪಾಕ್ ವಶದಲ್ಲಿರುವ ಭಾರತೀಯ ವಾಯುವಡೆಯ ವಿಂಗ್ ಕಮಾಂಡರ್‌ ಫೋಟೊ/ವಿಡಿಯೊವನ್ನುಪ್ರದರ್ಶಿಸಿರುವುದಕ್ಕೆ ಭಾರತಆಕ್ಷೇಪ ವ್ಯಕ್ತ ಪಡಿಸಿದೆ.ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಜಿನೀವಾ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ಭಾರತ ಆರೋಪಿಸಿದೆ.

ಭಾರತದ ವಾಯುವಲಯ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್‌ 21 ಯುದ್ಧ ವಿಮಾನ ಬುಧವಾರಹೊಡೆದುರುಳಿಸಿದೆ. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿದ್ದು, ಅದರ ಪೈಲಟ್‌ ಕಾಣೆಯಾಗಿದ್ದರು. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌, ನಮ್ಮ ವಿಮಾನ ಪತನವಾಗಿದ್ದು ಪೈಲಟ್‌ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದರು.

ಇತ್ತ ಪಾಕಿಸ್ತಾನಪೈಲಟ್‌ ನಮ್ಮ ವಶದಲ್ಲಿರುವುದಾಗಿ ಹೇಳಿತ್ತು.

ADVERTISEMENT

ಈ ಸಂಬಂಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸಯ್ಯದ್ ಹೈದರ್ ಶಾ ಅವರನ್ನು ದೆಹಲಿಗೆ ಕರೆಸಿ, ವಶದಲ್ಲಿರುವ ಪೈಲಟ್‍ನ್ನು ಬಿಡುಗೆ ಮಾಡುವಂತೆ ಹೇಳಿದೆ.

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಪಾಕ್ ಸೆರೆ ಹಿಡಿದಿದ್ದು, ಪಾಕ್ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ವಿಡಿಯೊ ಹರಿದಾಡಿದೆ.ಅಭಿನಂದನ್ ಅವರಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೊವೊಂದು ಮೊದಲು ಬಿಡುಗಡೆಯಾಗಿತ್ತು.ಅದರ ನಂತರ ಇನ್ನೊಂದು ವಿಡಿಯೊದಲ್ಲಿ ಟೀ ಕುಡಿಯುತ್ತಿರುವ ಅಭಿನಂದನ್, ತನ್ನನ್ನು ಇಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಜಿನೀವಾ ಒಪ್ಪಂದದ ಪ್ರಕಾರ ವಶ ಪಡಿಸಿಕೊಂಡಿರುವ ವ್ಯಕ್ತಿ ಜತೆಗೆ ಗೌರವದಿಂದ ವರ್ತಿಸಬೇಕು ಎಂದು ಭಾರತ ಪಾಕ್‍ಗೆ ಹೇಳಿದೆ.

ಏನಿದು ಜಿನೀವಾ ಒಪ್ಪಂದ ?
ಎರಡನೇ ಮಹಾಯುದ್ಧದ ಬಳಿಕ 1949ರಲ್ಲಿ ಏರ್ಪಟ್ಟ ಒಪ್ಪಂದ ಇದಾಗಿದ್ದು 196 ರಾಷ್ಟ್ರಗಳು ಇದಕ್ಕೆ ಸಹಿ ಹಾಕಿವೆ., ಈ ಒಪ್ಪಂದ ಪ್ರಕಾರ ಯುದ್ಧದಲ್ಲಿ ಸೆರೆಯಾಗಿರುವ ಕೈದಿಗಳನ್ನು ಮಾನವೀಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದಕೈದಿಗಳಿಗೆ ಚಿಕಿತ್ಸೆ ನೀಡಬೇಕು. ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಕೈದಿಗೆ ರಕ್ಷಣೆ ನೀಡಬೇಕು. ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಎಸಗಬಾರದು.

ಪಾಕಿಸ್ತಾನದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರ್ಥಮಾನ್‍ನ ವಿಡಿಯೊ ವಿಚಾರಣೆಗೊಳಗಾಗಿ ನಿಜ ಎಂದು ಸಾಬೀತಾದರೆ, ಅದು ಜಿನೀವಾ ಒಪ್ಪಂದದ ಉಲ್ಲಂಘನೆ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.