ADVERTISEMENT

ಗೋಪ್ಯ ಅಣ್ವಸ್ತ್ರ ಚಟುವಟಿಕೆಯು ಪಾಕ್‌ನ ಇತಿಹಾಸ: ಭಾರತ ಪ್ರತಿಕ್ರಿಯೆ

ಪಿಟಿಐ
Published 7 ನವೆಂಬರ್ 2025, 15:40 IST
Last Updated 7 ನವೆಂಬರ್ 2025, 15:40 IST
ರಣಧೀರ್‌ ಜೈಸ್ವಾಲ್‌
ರಣಧೀರ್‌ ಜೈಸ್ವಾಲ್‌   

ನವದೆಹಲಿ: ಪಾಕಿಸ್ತಾನವು ಅಣ್ವಸ್ತ್ರಗಳ ಪರೀಕ್ಷೆ ನಡೆಸುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹೇಳಿಕೆ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಭಾರತ, ‘ಈ ಬಗ್ಗೆ ನಾವು ಗಮನಹರಿಸಿದ್ದೇವೆ’ ಎಂದು ಹೇಳಿದೆ.

ಪಾಕಿಸ್ತಾನದ ರಹಸ್ಯ ಅಣ್ವಸ್ತ್ರ ಚಟುವಟಿಕೆಗಳು ದಶಕಗಳಿಂದಲೂ ಅದು ನಡೆಸುತ್ತಿರುವ ಕಳ್ಳಸಾಗಣೆ ಮತ್ತು ರಫ್ತು ನಿಯಂತ್ರಿತ ಉಲ್ಲಂಘನೆಯ ಕೇಂದ್ರಿತ ಚಟುವಟಿಕೆಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಅಣ್ವಸ್ತ್ರಗಳ ಪರೀಕ್ಷೆ ನಡೆಸುತ್ತಿರುವ ದೇಶಗಳನ್ನು ಉಲ್ಲೇಖಿಸಿದ್ದ ಟ್ರಂಪ್‌, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿದ್ದರು. ಮೂರು ದಶಕಗಳ ನಂತರ ಅಮೆರಿಕ ಸರ್ಕಾರ ಅಣ್ವಸ್ತ್ರ ಪರೀಕ್ಷೆಯನ್ನು ಪುನರಾರಂಭಿಸುವ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಭಾಗವಾಗಿ ಟ್ರಂಪ್‌ ಈ ಹೇಳಿಕೆ ನೀಡಿದ್ದರು. 

ADVERTISEMENT

ಮಾಧ್ಯಮ ಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜೈಸ್ವಾಲ್‌ ಅವರು, ‘ಗೋಪ್ಯ ಮತ್ತು ಅಕ್ರಮ ಅಣ್ವಸ್ತ್ರ ಚಟುವಟಿಕೆಗಳು ಪಾಕಿಸ್ತಾನದ ಇತಿಹಾಸದ ಭಾಗವಾಗಿವೆ. ಕಳ್ಳಸಾಗಣೆ, ರಫ್ತು ನಿಯಂತ್ರಿತ ಉಲ್ಲಂಘನೆ ಮತ್ತು ರಹಸ್ಯ ಪಾಲುದಾರಿಕೆಯ ಕೇಂದ್ರಿತವಾಗಿ ಅವು ನಡೆಯುತ್ತಿವೆ. ಪಾಕಿಸ್ತಾನದ ರಹಸ್ಯ ಚಟುವಟಿಕೆಗಳ ಬಗ್ಗೆ ಭಾರತ ನಿರಂತರವಾಗಿ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಲೇ ಬಂದಿದೆ. ಹೀಗಾಗಿ ಟ್ರಂಪ್‌ ಅವರ ಹೇಳಿಕೆ ಬಗ್ಗೆಯೂ ಗಮನ ಹರಿಸಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.