ADVERTISEMENT

ನಾಗ್ಪುರ: ಪೌರತ್ವ ಪಡೆಯುವ ತವಕದಲ್ಲಿ ವಲಸಿಗರು

ಪಿಟಿಐ
Published 13 ಮಾರ್ಚ್ 2024, 14:39 IST
Last Updated 13 ಮಾರ್ಚ್ 2024, 14:39 IST
-
-   

ನಾಗ್ಪುರ: ಇಲ್ಲಿ ನೆಲೆಸಿರುವ ಸುಮಾರು 2,000 ಪಾಕಿಸ್ತಾನಿ ಹಿಂದೂಗಳಲ್ಲಿ ಸಂತಸ ಮನೆ ಮಾಡಿದೆ. ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸಿರುವುದೇ ಇದಕ್ಕೆ ಕಾರಣ. ಹೀಗಾಗಿ ಇವರೆಲ್ಲ ಭಾರತೀಯ ಪೌರತ್ವ ಪಡೆಯುವ ತಯಾರಿಯಲ್ಲಿ ತೊಡಗಿದ್ದಾರೆ.

ಪದೇ ಪದೇ ವೀಸಾ ವಿಸ್ತರಣೆ ಮತ್ತು ಇತರ ದಾಖಲೆಗಳನ್ನು ಪಡೆದು ಭಾರತದಲ್ಲಿ ನೆಲೆಸಿರುವ ಈ ಜನರು ಇದೀಗ, ಭಾರತೀಯ ಪೌರತ್ವಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳತೊಡಗಿದ್ದಾರೆ. ಅಲ್ಲದೆ, ಭಾರತಕ್ಕೆ ಪ್ರವೇಶಿಸಿದ ನಿರಾಶ್ರಿತರ ಕಟ್‌–ಆಫ್‌ ದಿನಾಂಕದಲ್ಲಿ (2014ರ ಡಿಸೆಂಬರ್‌ 31) ಸಡಿಲಿಕೆ ಮಾಡುವಂತೆಯೂ ಅವರು ಕೇಂದ್ರ ಸರ್ಕಾವನ್ನು ಕೋರಿದ್ದಾರೆ.

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಘೋಟ್ಕಿ ಪಟ್ಟಣದ ವಿನೋದ್‌ ರಹೇಜಾ ಅವರು 2014ರ ಡಿಸೆಂಬರ್‌ 31ರಂದು ‘ವಿಸಿಟ್‌ ವೀಸಾ’ ಅಡಿಯಲ್ಲಿ ವಾಘಾ–ಅಟಾರಿ ಗಡಿಯ ಮೂಲಕ ಭಾರತ ಪ್ರವೇಶಿಸಿದರು. ಅವರ ಕುಟುಂಬದ ಏಳು ಮಂದಿಯೂ ಅವರೊಂದಿಗೆ ಭಾರತಕ್ಕೆ ಬಂದರು. ಅವರು ನಾಗ್ಪುರದ ಜರಿಪಟ್ಕಾ ಪ್ರದೇಶದಲ್ಲಿ ನೆಲೆಸಿದ್ದಾರೆ. ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವ ದೊರೆಯುವ ಅವಕಾಶ ಲಭಿಸಿರುವುದು ಸಂತಸ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಅವರು ಹೇಳಿದರು.

ADVERTISEMENT

‘ನಾವು ಭಾರತಕ್ಕೆ ಬಂದ ಆರು ತಿಂಗಳ ಬಳಿಕ ನನ್ನ ಅತ್ತೆ ಮತ್ತು ಅವರ ಕುಟುಂಬದವರು ಭಾರತಕ್ಕೆ ಬಂದರು. ಅಂತಹವರಿಗೆ ಅನುಕೂಲ ಕಲ್ಲಿಸಲು ಕಟ್‌–ಆಫ್‌ ದಿನಾಂಕವನ್ನು ಸಡಿಲಿಸುವಂತೆ’ ಅವರು ಪ್ರಧಾನಿ ಅವರಲ್ಲಿ ಮನವಿ ಮಾಡಿದರು.

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಿಂದ ತಮ್ಮ ಕುಟುಂಬದೊಂದಿಗೆ 2012ರಲ್ಲಿ ಭಾರತಕ್ಕೆ ಬಂದಿರುವ ಸಾಗರ್‌ ವಾಧ್ವಾ ಅವರೂ ಭಾರತದ ಪೌರತ್ವ ಪಡೆಯಲು ಉತ್ಸುಕರಾಗಿದ್ದಾರೆ. ಭಾರತಕ್ಕೆ ಬಂದಾಗ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಅವರಿಗೀಗ 27 ವರ್ಷ. ಪೌರತ್ವಕ್ಕಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿರುವುದಾಗಿ ಅವರು ಪ್ರತಿಕ್ರಿಯಿಸಿದರು.

ವಲಸಿಗರ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಜೇಶ್‌ ಝಾಂಬಿಯಾ ಅವರ ಪ್ರಕಾರ, ನಾಗ್ಪುರದಲ್ಲಿ 2000 ಜನರು ಅರ್ಜಿ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.