ಶ್ರೀನಗರ: 'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹಂತಕ,ಪಾಕಿಸ್ತಾನ ಉಗ್ರ ನವೀದ್ ಜಾಟ್ ಹಾಗೂ ಮತ್ತೊಬ್ಬ ಉಗ್ರನನ್ನು ಭದ್ರತಾ ಪಡೆ ಕಾಶ್ಮೀರದಲ್ಲಿ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೀದ್ ಜಾಟ್ ಫೆಬ್ರುವರಿಯಲ್ಲಿ ಶ್ರೀನಗರದ ಕೇಂದ್ರೀಯ ಕಾರಾಗೃಹದಿಂದ ಪರಾರಿಯಾಗಿದ್ದನು.
ನವೀದ್ ಮತ್ತು ಮತ್ತೊಬ್ಬ ಉಗ್ರ ಬದ್ಗಾಮ್ ಗ್ರಾಮದಲ್ಲಿ ಅಡಗಿರುವ ಕುರಿತು ಮಾಹಿತಿ ಪಡೆದ ಪೊಲೀಸರು, ಭದ್ರತಾ ಪಡೆಯೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನವೀದ್ ಜಾಟ್ ಹಾಗೂ ಮತ್ತೊಬ್ಬ ಉಗ್ರನನ್ನು ಹತ್ಯೆಗೈಯ್ಯಲಾಗಿದೆ. ಮೂವರು ಪೊಲೀಸರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಟ್‌ನ ಮೃತದೇಹವನ್ನು ಕೊಂಡೊಯ್ಯುವಂತೆ ಪಾಕಿಸ್ತಾನಕ್ಕೆ ಪತ್ರ ಬರೆಯುವಂತೆ ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಈತ ಎನ್‌ಕೌಂಟರ್ ವೇಳೆ 6 ಬಾರಿ ತಪ್ಪಿಸಿಕೊಳ್ಳಲುಪ್ರಯತ್ನಿಸಿದ್ದ. ಆದರೆ ಭದ್ರತಾ ಪಡೆ ಹರಸಾಹಸದ ನಡುವೆ ನವೀದ್‌ನನ್ನು ಕೊಂದು ಹಾಕಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಮೃತ ಉಗ್ರ ನವೀದ್, 26/11 ಮುಂಬೈ ದಾಳಿಯ ಉಗ್ರ ಲಷ್ಕರ್–ಇ–ತೊಯ್ಬಾ ಸಂಘಟನೆಯ ಅಜ್ಮಲ್ಕಸಬ್ ಬಳಿ ತರಬೇತಿ ಪಡೆದಿದ್ದನು. ಕಳೆದ ಜೂನ್‌ನಲ್ಲಿ ಶುಜಾತ್ ಬುಖಾರಿ ಅವರಿದ್ದ ಕಾರಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.