ಪಾಲಕ್ಕಾಡ್ (ಕೇರಳ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಹಲವು ಧಾರ್ಮಿಕ ಪದ್ಧತಿಗಳ ಹಾಗೂ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಡಿವೈಎಸ್‌ಪಿ ಒಬ್ಬರು ಸ್ಟೇಟಸ್ ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಡಿವೈಎಸ್‌ಪಿ ಅವರಿಂದ ಸ್ಪಷ್ಟನೆ ಕೋರಿದ್ದಾರೆ.
ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಡಿವೈಎಸ್‌ಪಿ ಇದೀಗ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಇದು ಅಚಾತುರ್ಯದಿಂದ ಆದ ತಪ್ಪು’ ಎಂದು ಒಪ್ಪಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
‘ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಾಟ್ಸ್ಆ್ಯಪ್‌ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿ ಮುರ್ಮು ಅವರ ಭೇಟಿ ವೇಳೆ ಶಬರಿಮಲೆಯಲ್ಲಿ ಕೆಲ ಸಂಪ್ರದಾಯ ಹಾಗೂ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಬರೆಯಲಾಗಿತ್ತು. ಆ ಸಂದೇಶ ಓದುತ್ತಿದ್ದ ಸಂದರ್ಭದಲ್ಲಿ ನನಗೇ ತಿಳಿಯದಂತೆ ಆ ಸಂದೇಶ ಸ್ಟೇಟಸ್‌ಗೆ ಅಪ್‌ಲೋಡ್ ಆಗಿದೆ. ಸ್ಟೇಟಸ್ ಗಮನಿಸಿ, ಕೆಲವು ಮಂದಿ ಕರೆ ಮಾಡಿ ವಿಚಾರಿಸಿದಾಗಲೇ ಸ್ಟೇಟಸ್ ಹಾಕಿರುವುದು ನನ್ನ ಗಮನಕ್ಕೆ ಬಂದಿದ್ದು’ ಎಂದು ಡಿವೈಎಸ್‌ಪಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಸ್ಟೇಟಸ್ ಹಾಕಿರುವುದು ತಿಳಿದ ತಕ್ಷಣವೇ ಅದನ್ನು ಡಿಲೀಟ್ ಮಾಡಿದ್ದಾಗಿಯೂ ಡಿವೈಎಸ್‌ಪಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.