ADVERTISEMENT

ಎಂ.ಜೆ.ಅಕ್ಬರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಪತ್ರಕರ್ತೆ ಪಲ್ಲವಿ ಗೊಗೊಯ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 8:47 IST
Last Updated 2 ನವೆಂಬರ್ 2018, 8:47 IST
   

ಬೆಂಗಳೂರು:ಮಾಜಿ ಸಚಿವ ಮತ್ತುಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ವಿರುದ್ಧ ಮತ್ತೋರ್ವ ಮಹಿಳೆಯ ಅತ್ಯಾಚಾರದ ಆರೋಪ ಮಾಡಿದ್ದಾರೆ. ‘ಒಂದು ದೊಡ್ಡ ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜಿ.ಅಕ್ಬರ್ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು’ ಎಂದು ದೂರಿದ್ದಾರೆ.

ಈ ಕುರಿತು ‘ದಿ ವಾಷಿಂಗ್‌ಟನ್‌ ಪೋಸ್ಟ್’ ದಿನಪತ್ರಿಕೆಗೆ ದೀರ್ಘ ಲೇಖನ ಬರೆದಿರುವ ಅಮೆರಿಕದಲ್ಲಿರುವ ಭಾರತ ಸಂಜಾತೆ ಪತ್ರಕರ್ತೆಪಲ್ಲವಿ ಗೊಗೊಯ್, ಈಚಿನ ದಿನಗಳಲ್ಲಿ ಎಂ.ಜೆ.ಅಕ್ಬರ್ ಕುರಿತು ಪ್ರಕಟವಾಗುತ್ತಿರುವ ಸುದ್ದಿಗಳನ್ನು ಓದಿದ ನಂತರ ಹಲವು ಗೆಳತಿಯರೊಡನೆ ಮಾತನಾಡಬೇಕು ಎನಿಸಿತು. ನನ್ನ ಕಥೆಯನ್ನೂ ಹೇಳಿಕೊಳ್ಳಲು ಧೈರ್ಯ ಬಂತು’ಎಂದು ಹೇಳಿಕೊಂಡಿದ್ದಾರೆ.

‘ದಿ ಏಷ್ಯನ್‌ ಏಜ್‌’ ಪತ್ರಿಕೆಯಲ್ಲಿ 22ನೇ ವರ್ಷಕ್ಕೆ ನನಗೆ ಕೆಲಸ ಸಿಕ್ಕಿತು. ನಮಗಿಂತ ಎಷ್ಟು ಮೇಲಿದ್ದೇನೆ ಎಂದು ತೋರಿಸುವ ಯಾವ ಅವಕಾಶವನ್ನೂ ಎಂ.ಜೆ.ಅಕ್ಬರ್ ಬಿಟ್ಟುಕೊಡುತ್ತಿರಲಿಲ್ಲ. ಏಷ್ಯನ್ ಏಜ್‌ಗೆ ಕೆಲಸಕ್ಕೆ ಸೇರಿದ ಒಂದು ವರ್ಷದಲ್ಲಿ ‘ಒಪ್‌ಎಡ್ ಪೇಜ್’ (ಅಭಿಪ್ರಾಯ ಪುಟ) ಸಂಪಾದಕಿಯಾದೆ. ನನ್ನ ಪ್ರೀತಿಯ ಕೆಲಸವನ್ನು ಇಷ್ಟಪಟ್ಟು ಮಾಡಿದ್ದಕ್ಕಾಗಿ ದೊಡ್ಡ ಬೆಲೆಯನ್ನೂ ತೆತ್ತೆ. ಒಮ್ಮೆ ನಾನು ರೂಪಿಸಿದ ಪುಟವನ್ನು ತೋರಿಸಲು ಹೋದಾಗ ಅಕ್ಬರ್ ನನ್ನನ್ನು ಹೊಗಳಿ, ಮುತ್ತು ಕೊಡಲು ಮುಂದೆ ಬಂದರು’ ಎಂದು ನೆನಪಿಸಿಕೊಂಡಿದ್ದಾರೆ.

ADVERTISEMENT

‘ಈ ಘಟನೆ ನಡೆದ ಕೆಲವೇ ತಿಂಗಳ ನಂತರ ಅಕ್ಬರ್ ನನ್ನನ್ನು ತಾಜ್ ಹೋಟೆಲ್‌ಗೆ ಕರೆಸಿ, ಮತ್ತೊಮ್ಮೆ ಇದೇ ರೀತಿ ಮುತ್ತು ಕೊಡಲು ಯತ್ನಿಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ನನ್ನ ಮುಖದ ಮೇಲೆಲ್ಲಾ ಪರಚಿದ್ದರು. ಈ ಘಟನೆಯಾದ ನಂತರ ಕಚೇರಿಗೆ ಬೇಗನೇ ಹೋಗಿ, ಇತರರು ಬರುವ ಮೊದಲೇ ಬಂದು ಕೆಲಸ ಮುಗಿಸಿಟ್ಟು ಹೋಗಲು ಯತ್ನಿಸುತ್ತಿದ್ದೆ. ಆದರೆ ತನಿಖಾ ವರದಿಯೊಂದರ ಕುರಿತು ಚರ್ಚಿಸಲು ಜೈಪುರದ ಹೋಟೆಲ್‌ಗೆ ಕರೆಸಿಕೊಂಡ ಅಕ್ಬರ್ ನನ್ನ ಮೇಲೆ ಬಲಾತ್ಕಾರ ಮಾಡಿಯೇ ಬಿಟ್ಟರು. ಅತ್ಯಾಚಾರದ ನಂತರ ನಾನು ಮಾನಸಿಕವಾಗಿಕುಗ್ಗುತ್ತಾ ಹೋದೆ. ಪರಿಸ್ಥಿತಿಯ ದುರ್ಲಾಭ ಪಡೆದ ಅಕ್ಬರ್ ಪದೇಪದೇ ನನ್ನ ಮೇಲೆ ಅತ್ಯಾಚಾರ ಎಸಗಿದರು’ ಎಂದು ದೂರಿದ್ದಾರೆ.

‘ಈ ಕುರಿತು ನನ್ನೊಡನೆ ಕೆಲಸ ಮಾಡುತ್ತಿದ್ದ ತುಷಿತಾ ಪಟೇಲ್ ಅವರೊಂದಿಗೆ ಮಾತನಾಡಿದೆ. ಏಷ್ಯನ್ ಏಜ್‌ನಲ್ಲಿದ್ದ ಕೆಲಸ ಬಿಟ್ಟು ನ್ಯೂಯಾರ್ಕ್‌ಗೆ ಹೋಗಿ ಕೆಲಸ ಹುಡುಕಿಕೊಂಡೆ. ಈಗ ನನಗೆ ಅಮೆರಿಕದ ಪೌರತ್ವೂ ಸಿಕ್ಕಿದೆ’ ಎಂದು ಅವರು ಬರೆದಿದ್ದಾರೆ.

ಪಲ್ಲವಿ ಗೊಗೊಯ್ ಮಾಡಿರುವ ಆರೋಪಗಳಿಗೆ ತಮ್ಮ ಕಕ್ಷೀದಾರ ಎಂ.ಜಿ.ಅಕ್ಬರ್ ಪರವಾಗಿ ‘ವಾಷಿಂಗ್‌ಟನ್‌ ಪೋಸ್ಟ್‌’ಗೆಪ್ರತಿಕ್ರಿಯಿಸಿರುವವಕೀಲ ಸಂದೀಪ್ ಕಪೂರ್ ‘ಈ ಎಲ್ಲ ಆರೋಪಗಳು ಮತ್ತು ಘಟನೆಗಳು ಸುಳ್ಳು ಮತ್ತು ನಿರಾಧಾರ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.