ADVERTISEMENT

ಪಂಢರಪುರದಲ್ಲಿ ಕಾರ್ತಿಕ ಏಕಾದಶಿ ವೈಭವ: ವಿಠಲನ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 14:04 IST
Last Updated 12 ನವೆಂಬರ್ 2024, 14:04 IST
<div class="paragraphs"><p>ಮಹಾರಾಷ್ಟ್ರದ ಪಂಢರಪುರದ ವಿಠಲ ದೇವಾಲಯ</p></div>

ಮಹಾರಾಷ್ಟ್ರದ ಪಂಢರಪುರದ ವಿಠಲ ದೇವಾಲಯ

   

ಪಂಢರಪುರ (ಮಹಾರಾಷ್ಟ್ರ): ‘ಭೂ ವೈಕುಂಠ’ ಎಂದೇ ಪ್ರಸಿದ್ಧವಾದ ಪಂಢರಪುರಕ್ಕೆ ಕಾರ್ತಿಕ ಏಕಾದಶಿಯಾದ ಮಂಗಳವಾರ ವಿಠಲನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತು.  

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ರಾಜ್ಯಗಳಿಂದ ಪಾದಯಾತ್ರೆ, ದಿಂಡಿಯಾತ್ರೆ ಪಂಢರಪುರಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತರು ‌ಇಲ್ಲಿನ ಚಂದ್ರಭಾಗ ನದಿಯಲ್ಲಿ ಮಿಂದು, ಸರತಿಸಾಲಿನಲ್ಲಿ ನಿಂತು ವಿಠಲನ ದರ್ಶನ ಪಡೆದರು.

ADVERTISEMENT

ಸಂಪ್ರದಾಯದಂತೆ ಕಾರ್ತಿಕ ಏಕಾದಶಿಯಂದು ಮಹಾರಾಷ್ಟ್ರ ಸರ್ಕಾರದ ಪ್ರಥಮ ಪೂಜೆಯನ್ನು ಈ ಬಾರಿ ಕೊಲ್ಹಾಪುರದ ವಿಭಾಗಿಯ ಆಯುಕ್ತ ಡಾ. ಚಂದ್ರಕಾಂತ ಪುಲಕುಂಡವಾರ ಅವರು ಪತ್ನಿ ಸಮೇತರಾಗಿ ನೆರವೇರಿಸಿದರು. ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ, ಕೊಲ್ಲಾಪುರ ವಿಭಾಗಿಯ ಪೊಲೀಸ್ ಮಹಾ ನಿರೀಕ್ಷಕ ಸುನಿಲ ಫುಲಾರಿ, ಮುಖ್ಯ ಕಾರ್ಯಕಾರಿ ಅಧಿಕಾರಿ ಕುಲದೀಪ ಜಂಗಮ, ಅಪರ ಜಿಲ್ಲಾಧಿಕಾರಿ ಮೋನಿಕಾ ಸಿಂಗ್ ಠಾಕೂರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರೀತಮ್‌ ಯಾವಲಕರ, ಉಪ ವಿಭಾಗಿಯ ಅಧಿಕಾರಿ ಸಚಿನ ಇತಾಫೆ, ತಹಶೀಲ್ದಾರ್ ಸಚಿನ್ ಲಂಗುಟೆ, ಮುಖ್ಯಾಧಿಕಾರಿ ಪ್ರಶಾಂತ ಜಾದವ ಸರ್ಕಾರದ ಪರ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಕಾರ್ಯಕ್ರಮ: ಏಕಾದಶಿ ದಿನ ಅಂಗವಾಗಿ ವಾರ್ಕರಿ ಸಪ್ತಾಹ ಜರುಗಿತು. ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ ನಾಮದೇವ, ದಾಮಾಜಿ, ಮೀರಾಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ವಾರ್ಕರಿ ರಾಗದಿಂದ ಹಾಡುತ್ತಾ ಕುಣಿಯುತ್ತ ಭಜನೆ, ನಾಮ ಸಂಕೀರ್ತನೆಗಳಲ್ಲಿ ಭಕ್ತರು ಮೈಮರೆತ್ತಿದ್ದರು.

ತುಳಸಿ ಮಾಲೆ ಧರಿಸಿದ ಸಂತರು, ತಲೆಯ ಮೇಲೆ ಉಳಸಿಕಟ್ಟೆ ಹೊತ್ತು, ಹೆಜ್ಜೆ ಹಾಕುತ್ತಾ ಕೈ ಕೈ ಹಿಡಿದು ಕುಣಿದು ಗೋಪಾಲನಿಗೆ ಜೈಕಾರ ಹಾಕುತ್ತಿದ್ದ ದೃಶ್ಯ ಎಲ್ಲೆಡೆ ದರ್ಶನವಾಯಿತು. ಸಂಜೆ ವಿಠಲ ರುಕ್ಮಿಣಿ ಪಲ್ಲಕ್ಕಿ ಉತ್ಸವ ಪಂಢರಪುರದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.