ADVERTISEMENT

ಪರಮ್ ಬಿರ್ ಸಿಂಗ್ ಭೂಗತ ಲೋಕದ ಸಂಪರ್ಕ ಹೊಂದಿದವರನ್ನು ರಕ್ಷಿಸಿದ್ದಾರೆ: ಪೊಲೀಸರು

ಪಿಟಿಐ
Published 22 ಮಾರ್ಚ್ 2021, 11:17 IST
Last Updated 22 ಮಾರ್ಚ್ 2021, 11:17 IST
ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್
ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್   

ಮುಂಬೈ: ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿಜಿಯಾಗಿದ್ದಾಗ ಭೂಗತಲೋಕದ ಸಂಪರ್ಕ ಹೊಂದಿರುವ ಕೆಲವು ಜನರನ್ನು ಕಾನೂನಿನಿಂದ ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಅಮಾನತುಗೊಂಡ ಮುಂಬೈ ಪೊಲೀಸ್ ಇನ್‌ಸ್ಪೆಕ್ಟರ್‌ ಒಬ್ಬರು ಆರೋಪಿಸಿದ್ದಾರೆ.

ತನ್ನನ್ನು ಮತ್ತೆ ಪೊಲೀಸ್ ಕರ್ತವ್ಯಕ್ಕೆ ನಿಯೋಜಿಸಲು ಸಿಂಗ್ ಅವರ ಸಹಾಯಕರು 2 ಕೋಟಿ ರೂಪಾಯಿಗಳ ಲಂಚಕ್ಕೆ ಒತ್ತಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2020ರ ಜುಲೈನಲ್ಲಿ ಅಮಾನತುಗೊಳ್ಳುವ ಮೊದಲು ಗಾಂದೇವಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ ಅನೂಪ್ ಡಾಂಗೆ, 2021ರ ಫೆ.2 ರಂದು ಸಿಂಗ್ ವಿರುದ್ಧ ಮಹಾರಾಷ್ಟ್ರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ADVERTISEMENT

ಮುಂಬೈನ ಐಷಾರಾಮಿ ಬ್ರೀಚ್ ಕ್ಯಾಂಡಿ ಪ್ರದೇಶದಲ್ಲಿನ ಪಬ್ ಮಾಲೀಕ ಜೀತು ನವ್ಲಾನಿ ಅವರು ನ. 22, 2019 ರಂದು ಸಮಯಕ್ಕೆ ಸರಿಯಾಗಿ ಪಬ್‌ಗಳನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾಗ ಬೆದರಿಕೆ ಹಾಕಿದ್ದರು. ಆಗ ಎಸಿಬಿಯ ಡಿಜಿ ಆಗಿದ್ದ ಪರಮ್ ಬಿರ್ ಸಿಂಗ್ ಅವರೊಂದಿಗೆ ನಿಕಟ ಸಂಬಂಧವಿದೆ ಎಂದು ಹೇಳುವ ಮೂಲಕ ನವ್ಲಾನಿ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು ಎಂದು ಡಾಂಗೆ ಪತ್ರದಲ್ಲಿ ತಿಳಿಸಿದ್ದಾರೆ.

ಕಾನ್‌ಸ್ಟೆಬಲ್ ಸಂತೋಷ್ ಪವಾರ್ ಮಧ್ಯ ಪ್ರವೇಶಿಸಿದಾಗ, ಅವರ ಮೇಲೆ ಚಲನಚಿತ್ರ ಮತ್ತು ವಜ್ರದ ವ್ಯಾಪಾರಿ ಭರತ್ ಷಾ ಅವರ ಮೊಮ್ಮಗ ಯಶ್ ರಾಜೀವ್ ಮೆಹ್ತಾ ಅವರು ಹಲ್ಲೆ ಮಾಡಿದರು. ಈ ವಿಚಾರವಾಗಿ ಎಫ್‌ಐಆರ್ ದಾಖಲಿಸಿದ್ದೆ. ಸ್ವಲ್ಪ ಸಮಯದ ನಂತರ, ಭರತ್ ಷಾ ಅವರೇ ಪೊಲೀಸ್ ಠಾಣೆಗೆ ಬಂದು ಯಶ್ ಮೆಹ್ತಾ ಅವರನ್ನು ಬಿಡುಗಡೆ ಮಾಡಲು ಡಾಂಗೆ ಅವರ ಮನವೊಲಿಸಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ತರುವಾಯ ಡಾಂಗೆ ಅವರು ಎರಡನೇ ಎಫ್ಐಆರ್ ದಾಖಲಿಸಿದರು.

ಫೆ. 29, 2020 ರಂದು ಪರಮ್ ಬೀರ್ ಸಿಂಗ್ ಮುಂಬೈ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ನವ್ಲಾನಿ ಪ್ರಕರಣದಲ್ಲಿ ಯಾವುದೇ ಚಾರ್ಜ್‌ಶೀಟ್ ದಾಖಲಿಸಬಾರದು ಎಂದು ಸಿಂಗ್ ಆದೇಶಿಸಿದರು. ಮರೀನ್ ಡ್ರೈವ್ ಪೊಲೀಸ್ ಠಾಣೆ ಎದುರಿನ ಮೋತಿ ಮಹಲ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಖಾಸಗಿ ಫ್ಲ್ಯಾಟ್‌ನಲ್ಲಿ ಸಿಂಗ್ ನವ್ಲಾನಿಯನ್ನು ಭೇಟಿಯಾದರು ಎಂದು ಅವರು ಹೇಳಿದ್ದಾರೆ.

ಈ ಫ್ಲ್ಯಾಟ್ ಅನ್ನು ಸಿಂಗ್ ಅವರ ಸೋದರ ಸಂಬಂಧಿ ಎಂದು ಹೇಳಿಕೊಳ್ಳುವ ಶಾರ್ದುಲ್ ಸಿಂಗ್ ಬಯಾಸ್ ಅವರು ಬಾಡಿಗೆಗೆ ಪಡೆದಿದ್ದರು. ಚಾರ್ಜ್‌ಶೀಟ್‌ನಿಂದ ತಮ್ಮ ಹೆಸರನ್ನು ಕೈಬಿಡಬೇಕೆಂದು ನವ್ಲಾನಿ ಬಯಸಿದ್ದರು. ಅವರನ್ನು ಶಿಕ್ಷೆಯಿಂದ ತಪ್ಪಿಸುವುದಕ್ಕಾಗಿ ಬಯಾಸ್, 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಜುಲೈ 2020 ರಲ್ಲಿ, ಡಾಂಗೆ ಅವರನ್ನು ಅಮಾನತುಗೊಳಿಸಲಾಯಿತು. ತನ್ನನ್ನು ಮತ್ತೆ ಪೊಲೀಸ್ ಪಡೆಯಲ್ಲಿ ಪುನಃ ಸೇರಿಸಿಕೊಳ್ಳಲು ಬಯಾಸ್ ಅವರು ಎರಡು ಕೋಟಿ ರೂ. ನೀಡುವಂತೆ ಒತ್ತಾಯಿಸಿದರು ಎಂದು ಪತ್ರದಲ್ಲಿ ಹೇಳಲಾಗಿದೆ.

'ಭಾರತ್ ಶಾ ಮತ್ತು ಶಾರ್ದುಲ್ ಸಿಂಗ್ ಬಯಾಸ್ ಅವರು ಭೂಗತಲೋಕದ ಸಂಪರ್ಕವನ್ನು ಹೊಂದಿರುವ ಸಂಶಯಾಸ್ಪದ ವ್ಯಕ್ತಿಗಳು' ಎಂದು ಅವರು ಹೇಳಿದರು. ತನ್ನ ವಿರುದ್ಧ ನಡೆಯುತ್ತಿರುವ ಇಲಾಖಾ ವಿಚಾರಣೆಯನ್ನು ಯಾವುದೇ ಐಎಎಸ್ ಅಧಿಕಾರಿಗೆ ವರ್ಗಾಯಿಸಬೇಕು ಎಂದು ಡಾಂಗೆ ಒತ್ತಾಯಿಸಿದ್ದಾರೆ.

ಕಳೆದ ತಿಂಗಳು ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮುಂಬೈ ನಗರ ಪೊಲೀಸ್‌ ಆಯುಕ್ತ ಹುದ್ದೆಯಿಂದ ಪರಮ್‌ ಬೀರ್‌ ಸಿಂಗ್‌ ಅವರನ್ನು ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿ ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.