ADVERTISEMENT

‘ಪರೀಕ್ಷಾ ಪೇ ಚರ್ಚಾ’ದ 9ನೇ ಆವೃತ್ತಿಗೆ 3 ಕೋಟಿ ನೋಂದಣಿ

ಪಿಟಿಐ
Published 1 ಜನವರಿ 2026, 13:23 IST
Last Updated 1 ಜನವರಿ 2026, 13:23 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ದ ಒಂಬತ್ತನೇ ಆವೃತ್ತಿಯು ಈ ತಿಂಗಳಾಂತ್ಯದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಇದುವರೆಗೆ ಮೂರು ಕೋಟಿಗೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಆಯ್ಕೆಗಾಗಿ, ಡಿಸೆಂಬರ್‌ 1ರಿಂದ ಜನವರಿ 11ರವರೆಗೆ MyGov.in ಪೋರ್ಟಲ್‌ನಲ್ಲಿ ಬಹು ಆಯ್ಕೆಯ ಪ್ರಶ್ನೆಗಳೊಂದಿಗೆ ಆನ್‌ಲೈನ್‌ನಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರೀಕ್ಷಾ ಪೇ ಚರ್ಚಾದ ಎಂಟನೇ ಆವೃತ್ತಿಯನ್ನು ಕಳೆದ ವರ್ಷ ಫೆಬ್ರುವರಿ 10ರಂದು ಪ್ರಸಾರ ಮಾಡಲಾಗಿತ್ತು. ರಾಷ್ಟ್ರ ರಾಜಧಾನಿಯ ಸುಂದರ್‌ ನರ್ಸರಿಯಲ್ಲಿ ಈ ಸಂವಾದವು ಹೊಸ ಸ್ವರೂಪದಲ್ಲಿ ನಡೆದಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳು ಮತ್ತು ಸಿಬಿಎಸ್‌ಇ ಶಾಲೆಗಳ 36 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಈ ಆವೃತ್ತಿಯು ಕ್ರೀಡೆ, ಶಿಸ್ತು, ಮಾನಸಿಕ ಆರೋಗ್ಯ, ಪೋಷಣೆ, ತಂತ್ರಜ್ಞಾನ, ಹಣಕಾಸು, ಸೃಜನಶೀಲ ಮತ್ತು ಸಕಾರಾತ್ಮಕ ವಿಷಯಗಳನ್ನು ಒಳಗೊಂಡ ಏಳು ಪ್ರತ್ಯೇಕ ಸಂಚಿಕೆಗಳನ್ನು ಒಳಗೊಂಡಿದೆ. ಪ್ರಸಿದ್ಧ ವ್ಯಕ್ತಿಗಳಿಂದ ಸ್ಫೂರ್ತಿದಾಯಕ ಒಳನೋಟಗಳನ್ನು ನೀಡುತ್ತದೆ.

2025ರ ‘ಪರೀಕ್ಷಾ ಪೇ ಚರ್ಚಾ’ದಲ್ಲಿ 245ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು, 153 ದೇಶಗಳ ಶಿಕ್ಷಕರು ಮತ್ತು 149 ದೇಶಗಳ ಪೋಷಕರು ಭಾಗವಹಿಸಿದ್ದು, ಗಿನ್ನೆಸ್‌ ದಾಖಲೆ ನಿರ್ಮಿಸಿತ್ತು.

2018ರ ಮೊದಲ ಆವೃತ್ತಿಯಲ್ಲಿ 22 ಸಾವಿರ ಮಂದಿ ನೋಂದಾಯಿಸಿದ್ದರು. 2025ರ ಎಂಟನೇ ಆವೃತ್ತಿಯಲ್ಲಿ 3.56 ಕೋಟಿ ಮಂದಿ ನೋಂದಣಿ ಹಾಗೂ ದೇಶದಾದ್ಯಂತ ಜನಾಂದೋಲನ ಚಟುವಟಿಕೆಗಳಲ್ಲಿ 1.55 ಕೋಟಿ ಮಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.