ADVERTISEMENT

ಏರ್‌ ಇಂಡಿಯಾಕ್ಕೆ ಮತ್ತೆ ₹ 10 ಲಕ್ಷ ದಂಡ ವಿಧಿಸಿದ ಡಿಜಿಸಿಎ

ಪಿಟಿಐ
Published 24 ಜನವರಿ 2023, 13:49 IST
Last Updated 24 ಜನವರಿ 2023, 13:49 IST
   

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ಯಾರಿಸ್–ನವದೆಹಲಿ ವಿಮಾನದಲ್ಲಿ ನಡೆದಿದ್ದ ಪ್ರಯಾಣಿಕರ ಎರಡು ಅಶಿಸ್ತಿನ ಪ್ರಕರಣಗಳ ಕುರಿತಂತೆ ವರದಿ ಮಾಡದ ಹಿನ್ನೆಲೆಯಲ್ಲಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೆಶನಾಲಯವು(ಡಿಜಿಸಿಎ) ₹ 10 ಲಕ್ಷ ದಂಡ ವಿಧಿಸಿದೆ.

ಪ್ರಯಾಣಿಕರ ಅಶಿಸ್ತಿನ ನಡವಳಿಕೆ ಕುರಿತಂತೆ ವಾರಕ್ಕೂ ಕಡಿಮೆ ಸಮಯದಲ್ಲಿ ಏರ್ ಇಂಡಿಯಾ ವಿರುದ್ಧ ಡಿಜಿಸಿಎ ಕೈಗೊMಡ ಎರಡನೇ ಕಠಿಣ ಕ್ರಮ ಇದಾಗಿದೆ.

ಡಿಸೆಂಬರ್ 6, 2022ರಂದು ಪ್ಯಾರಿಸ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಎಐ–142 ವಿಮಾನದಲ್ಲಿ ಪ್ರಯಾಣಿಕರು ದುರ್ವರ್ತನೆ ತೋರಿದ್ದಾರೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಯಾಣಿಕನೊಬ್ಬ ನಿಯಮಗಳನ್ನು ಬದಿಗೊತ್ತಿ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ. ವಿಮಾನದ ಸಿಬ್ಬಂದಿ ಮಾತಿಗೂ ಬೆಲೆ ಕೊಟ್ಟಿರಲಿಲ್ಲ. ಮತ್ತೊಬ್ಬ ಪ್ರಯಾಣಿಕ, ಪಕ್ಕದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಶೌಚಕ್ಕೆ ತೆರಳಿದಾಗ, ಅವರ ಖಾಲಿ ಸೀಟಿನಲ್ಲಿ ಮಲಗಿ ಬ್ಲಾಂಕೆಟ್ ಬಳಕೆ ಮಾಡಿದ್ದ.

‘ಈ ಅಶಿಸ್ತಿನ ಘಟನೆಗಳನ್ನು ವರದಿ ಮಾಡದ ಮತ್ತು ಆಂತರಿಕ ಸಮಿತಿಗೆ ಒಪ್ಪಿಸುವಲ್ಲಿ ಮಾಡಿದ ವಿಳಂಬವನ್ನು ಪರಿಗಣಿಸಿದ್ದು, ಇದು ಡಿಜಿಸಿಎ ನಿಯಮಗಳಿಗೆ ವಿರುದ್ಧವಾಗಿದ್ದು, ₹10 ಲಕ್ಷ ದಂಡ ಹಾಕುವ ಮೂಲಕ ಏರ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ’ಎಂದು ಅದು ಹೇಳಿದೆ.

ಈ ಸಂಬಂಧ ಏರ್ ಇಂಡಿಯಾಕ್ಕೆ ಈ ಹಿಂದೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ಅದರಿಂದ ಬಂದ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ಬಳಿಕವೇ ಏರ್ ಇಂಡಿಯಾಕ್ಕೆ ₹ 10 ಲಕ್ಷ ದಂಡವನ್ನು ವಿಧಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ.

ನವೆಂಬರ್‌ನಲ್ಲಿ ನ್ಯೂಯಾರ್ಕ್‌–ನವದೆಹಲಿಯ ವಿಮಾನದಲ್ಲಿ ಮುಂಬೈನ ವ್ಯಕ್ತಿಯೊಬ್ಬರು ವೃದ್ಧೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದಲ್ಲಿ ಡಿಜಿಸಿಎಯು ಏರ್ ಇಂಡಿಯಾಕ್ಕೆ ಕಳೆದ ಶುಕ್ರವಾರವಷ್ಟೇ (ಜ. 20) ₹ 30 ಲಕ್ಷ ದಂಡ ವಿಧಿಸಿತ್ತು. ಇದೀಗ ಮತ್ತೊಂದು ದಂಡ ವಿಧಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.