ADVERTISEMENT

ಸ್ಥಾಯಿ ಸಮಿತಿಗೆ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 16:18 IST
Last Updated 9 ಡಿಸೆಂಬರ್ 2022, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವ ಉದ್ದೇಶದ ವಿವಿಧ ರಾಜ್ಯಗಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆಯನ್ನು ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದರಾಜ್ಯಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಜೈರಾಮ್ ರಮೇಶ್, ಸಹಕಾರ ಸಚಿವಾಲಯದ ಉಸ್ತುವಾರಿಯೂ ಆಗಿರುವ ಶಾ ಅವರಿಗೆ ಶುಕ್ರವಾರ ಬೆಳಿಗ್ಗೆ ಕರೆ ಮಾಡಿ ಪ್ರತಿಪಕ್ಷಗಳ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಬುಧವಾರ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಯನ್ನು ಗೃಹ ಸಚಿವಾಲಯದ ವ್ಯವಹಾರಗಳನ್ನು ಪರಿಶೀಲಿಸುವ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗುವುದೆಂದು ಶಾ ಭರವಸೆ ನೀಡಿದರು ಎಂದು ರಮೇಶ್ ಹೇಳಿದರು.

ADVERTISEMENT

ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಅವರು ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿದರು.

ಬುಧವಾರ ಮಸೂದೆ ಮಂಡಿಸಿದಾಗ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ಈ ಮಸೂದೆ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ವಿರೋಧ ಪಕ್ಷಗಳ ಸಂಸದರು, ಮಂಡನೆಗೂ ಮೊದಲು ಮಸೂದೆಯನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಗೆ ಕಿವಿಗೊಟ್ಟಿರಲಿಲ್ಲ.

ಈ ಮಸೂದೆಯಿಂದ ಸಹಕಾರಿ ವಲಯದ ಆಡಳಿತ ಬಲಪಡಿಸಲು, ಚುನಾವಣಾ ಪ್ರಕ್ರಿಯೆ ಸುಧಾರಿಸಲು, ಮೇಲ್ವಿಚಾರಣಾ ಕಾರ್ಯ ವಿಧಾನ ಸುಧಾರಣೆಗೆ ನೆರವಾಗಲಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಘಗಳಲ್ಲಿ ನಡೆಸುವ ವ್ಯವಹಾರಗಳನ್ನು ಇದು ಸರಳಗೊಳಿಸುವ ಖಾತ್ರಿ ಇದೆ. ನಿಯಮಗಳ ಉಲ್ಲಂಘನೆಗಾಗಿ ವಿವಿಧ ರಾಜ್ಯಗಳ ಸಹಕಾರಿ ಸಂಘಗಳ ಮೇಲಿನ ವಿತ್ತೀಯ ದಂಡ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ತಿದ್ದುಪಡಿಯನ್ನು ಸಹ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.