ADVERTISEMENT

ಎನ್‌ಐಎ; ಮಸೂದೆಗೆ ರಾಜ್ಯಸಭೆ ಒಪ್ಪಿಗೆ

ಪಿಟಿಐ
Published 17 ಜುಲೈ 2019, 18:34 IST
Last Updated 17 ಜುಲೈ 2019, 18:34 IST
   

ನವದೆಹಲಿ:ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹೆಚ್ಚಿನ ಅಧಿಕಾರ ನೀಡುವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಬುಧವಾರ ಅನುಮೋದನೆ ದೊರೆತಿದೆ. ಲೋಕಸಭೆಯಲ್ಲಿ ಈ ಮಸೂದೆಗೆ ಈ ಹಿಂದೆಯೇ ಅನುಮೋದನೆ ದೊರೆತಿತ್ತು.

ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲೂ ತನಿಖೆ ನಡೆಸುವ ಅಧಿಕಾರವನ್ನು ಈ ಮಸೂದೆಯು ಎನ್‌ಐಎಗೆ ನೀಡುತ್ತದೆ. ಅಲ್ಲದೆ ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ಅಧಿಕಾರವನ್ನೂ ಈ ಮಸೂದೆ ಎನ್‌ಐಎಗೆ ನೀಡುತ್ತದೆ.ಇಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ರಚಿಸಲು ಈ ತಿದ್ದುಪಡಿ ಮಸೂದೆಯಲ್ಲಿ ಅವಕಾಶವಿದೆ.

ಅನುಮೋದನೆಗೂ ಮುನ್ನ ಈ ಮಸೂದೆಯ ಮೇಲೆ ರಾಜ್ಯಸಭೆಯಲ್ಲಿ ಭಾರಿ ಚರ್ಚೆ ನಡೆಯಿತು.

ADVERTISEMENT

‘ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ಅಧಿಕಾರವನ್ನು ಎನ್‌ಐಎಗೆ ನೀಡುವುದರಿಂದ ರಾಜ್ಯ ಸರ್ಕಾರಗಳ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಅಲ್ಲದೆ ಇದರಿಂದಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಉಂಟಾಗುತ್ತದೆ’ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ವಿವೇಕ್ ತಂಖಾ ಆಕ್ಷೇಪ ವ್ಯಕ್ತಪಡಿಸಿದರು.

‘ಇದು ಒಂದು ಉತ್ತಮ ಮಸೂದೆ ಇರಬಹುದು. ಆದರೆ ಅನುಷ್ಠಾನ ಕಷ್ಟವಾಗುತ್ತದೆ’ ಎಂದು ವಿವೇಕ್ ಹೇಳಿದರು.

‘ವಿದೇಶಗಳಲ್ಲಿ ತನಿಖೆ ನಡೆಸಲು ಈ ಮಸೂದೆಯು ಎನ್‌ಐಎಗೆ ಅವಕಾಶ ನೀಡುತ್ತದೆ. ಆದರೆ ಅಂತಹ ತನಿಖೆ ನಡೆಸಲು ಪಾಕಿಸ್ತಾನವು ಅವಕಾಶ ನೀಡುತ್ತದೆಯೇ? ತನಿಖೆ ನಡೆಸಲು ಪಾಕಿಸ್ತಾನಕ್ಕೆ ಹೋಗುವುದು ಹೇಗೆ?’ ಎಂದು ಟಿಎಂಸಿಯ ಡೆರೆಕ್ ಒಬ್ರಿಯಾನ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.