ADVERTISEMENT

Parliament Security Breach | ಆಗಂತುಕರು ಸಿಂಪಡಿಸಿದ ಬಣ್ಣದ ಹೊಗೆ ಅಪಾಯಕಾರಿಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2023, 11:54 IST
Last Updated 13 ಡಿಸೆಂಬರ್ 2023, 11:54 IST
<div class="paragraphs"><p>ಸಂಸತ್‌ ಭವನದ ಹೊರಗೆ&nbsp;</p></div>

ಸಂಸತ್‌ ಭವನದ ಹೊರಗೆ 

   

ನವದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಸದನದೊಳಗೆ ನುಗ್ಗಿದ ಇಬ್ಬರು ಆಗಂತುಕರು ಸಿಂಪಡಿಸಿದ ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. 

ಇದು ಅಪಾಯಕಾರಿಯೇ? ಇದರಲ್ಲಿ ವಿಷಾನಿಲ ತುಂಬಿರುತ್ತದೆಯೇ? ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ. 

ADVERTISEMENT

ತನಿಖೆ ನಡೆಸುತ್ತಿರುವ ಪೊಲೀಸರು ತಮ್ಮ ಪ್ರಾಥಮಿಕ ಮಾಹಿತಿ ಅನ್ವಯ ಇದು ಅಪಾಯಕಾರಿಯಾಗಿರಲಿಲ್ಲ ಎಂದಿದ್ದಾರೆ. ಹೀಗಿದ್ದರೂ ಇಂಥ ಬಣ್ಣ ಬಣ್ಣದ ಹೊಗೆ ಸಿಂಪಡಿಸುವ ಕ್ಯಾನ್‌ಗಳು ರಿಟೇಲ್ ಮಳಿಗೆಗಳಲ್ಲೂ ಲಭ್ಯ. ವಿದೇಶಗಳಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

ಸ್ಮೋಕ್ ಕ್ಯಾನ್ ಅಥವಾ ಸ್ಮೋಕ್ ಬಾಂಬ್ ಎಂದು ಕರೆಯಲಾಗುವ ಇವುಗಳನ್ನು ಕ್ರೀಡೆಗಳಲ್ಲಿ, ಫೋಟೊ ಶೂಟ್ ಸಂದರ್ಭದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಜತೆಗೆ ಸೇನೆಯಲ್ಲೂ ಬಳಸುತ್ತಾರೆ. ಸೇನೆಯಲ್ಲಿ ಶತ್ರುಗಳ ಕೈಗೆ ಸಿಕ್ಕಾಗ, ತಮ್ಮವರಿಗೆ ಅಪಾಯದ ಸೂಚನೆ ನೀಡಲು ಸ್ಮೋಕ್ ಬಾಂಬ್ ಬಳಸುವ ಪದ್ಧತಿ ಇದೆ. ಇನ್ನೂ ಕೆಲವೊಮ್ಮೆ ವೈಮಾನಿಕ ದಾಳಿ ಸಂದರ್ಭದಲ್ಲಿ, ತುಕಡಿಗಳನ್ನು ಧರೆಗಿಳಿಸುವ ಸಂದರ್ಭದಲ್ಲೂ ಬಳಸಲಾಗುತ್ತದೆ.

ಛಾಯಾಚಿತ್ರ ತೆಗೆಯುವ ಸಂದರ್ಭದಲ್ಲಿ ವಿಶೇಷ ಎಫೆಕ್ಟ್ ನೀಡಲು ಇಂಥ ಬಣ್ಣ ಬಣ್ಣದ ಸ್ಮೋಕ್ ಬಾಂಬ್‌ಗಳನ್ನು ಬಳಸಲಾಗುತ್ತಿದೆ. ಇದರೊಂದಿಗೆ ಹಲವು ದೇಶಗಳಲ್ಲಿ ಫುಟ್‌ಬಾಲ್ ಹಾಗೂ ಇನ್ನಿತರ ಕ್ರೀಡೆಗಳ ಸಂದರ್ಭದಲ್ಲಿ ಇದನ್ನು ಬಳಸಲಾಗುತ್ತಿದೆ. 

‘ಭದ್ರತಾ ಲೋಪ ಕುರಿತು ಲೋಕಸಭೆಯೂ ತನಿಖೆ ನಡೆಸಲಿದೆ. ಘಟನೆ ಕುರಿತು ಪ್ರತ್ಯೇಕ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೂ ನಿರ್ದೇಶಿಸಲಾಗುವುದು. ಸಂಸತ್‌ ಒಳಗೆ ಹಾರಿಸಲಾದ ಹಳದಿ ಬಣ್ಣದ ಹೊಗೆ ಅಪಾಯಕಾರಿ ಅಲ್ಲ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆ ನಡೆಸಿ ಹೇಳಿದ್ದಾರೆ. ಇದನ್ನು ಗಮನ ಸೆಳೆಯಲು ಅವರು ಬಳಸಿರುವ ಸಾಧ್ಯತೆ ಕುರಿತೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.