ADVERTISEMENT

ದೇಶದ ಮಧ್ಯಮ ವರ್ಗದವರ ಸೂರಿನ ಕನಸು ಈಡೇರಿಸಲು ಸರ್ಕಾರ ಬದ್ಧ: ರಾಷ್ಟ್ರಪತಿ ಮುರ್ಮು

2025–26ರ ಬಜೆಟ್‌ ಅಧಿವೇಶನ ಆರಂಭ; ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಪಿಟಿಐ
Published 31 ಜನವರಿ 2025, 15:28 IST
Last Updated 31 ಜನವರಿ 2025, 15:28 IST
<div class="paragraphs"><p>ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ಉಪರಾಷ್ಟ್ರಪತಿ ಜಗದೀಪ ಧನಕರ್ ಹಾಗೂ ಲೋಕಸಭಾಧ್ಯಕ್ಷ ಓಂ ಬಿರ್ಲಾ ಇದ್ದಾರೆ.</p></div>

ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ಉಪರಾಷ್ಟ್ರಪತಿ ಜಗದೀಪ ಧನಕರ್ ಹಾಗೂ ಲೋಕಸಭಾಧ್ಯಕ್ಷ ಓಂ ಬಿರ್ಲಾ ಇದ್ದಾರೆ.

   

ಪಿಟಿಐ ಚಿತ್ರ

ನವದೆಹಲಿ: ‘ದೇಶದ ಮಧ್ಯಮವರ್ಗದವರ ಸ್ವಂತ ಸೂರಿನ ಕನಸು ಈಡೇರಿಸಲು ಈ ಸರ್ಕಾರ ಬದ್ಧವಾಗಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಹೇಳಿದರು. 

ADVERTISEMENT

ಬಜೆಟ್ ಅಧಿವೇಶನ ಆರಂಭದ ದಿನದಂದು ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ ಈ ಸರ್ಕಾರದ ಮೂರನೇ ಅವಧಿಯಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತಿದೆ. 70 ವರ್ಷ ಮೇಲಿನ ಆರು ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸೌಕರ್ಯ ನೀಡುವ ಬೃಹತ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ನೂತನ ಶಿಕ್ಷಣ ನೀತಿ ಮೂಲಕ ಯುವ ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡುವುದರಿಂದ ಅವರನ್ನು ಸಶಕ್ತರನ್ನಾಗಿಸಲಾಗುತ್ತಿದೆ’ ಎಂದರು.

‘ವಕ್ಫ್‌ ಆಸ್ತಿ ಹಾಗೂ ಒಂದು ದೇಶ, ಒಂದು ಚುನಾವಣೆ ವಿಷಯದಲ್ಲೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ. ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 91 ಲಕ್ಷ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಬ್ಯಾಂಕಿಂಗ್ ಮತ್ತು ಡಿಜಿ ಪಾವತಿ ಮೂಲಕ ಗ್ರಾಮೀಣ ಭಾಗದ ಜನರನ್ನೂ ದೇಶದ ಆರ್ಥಿಕ ವ್ಯವಸ್ಥೆಯೊಳಗೆ ತರಲಾಗಿದೆ’ ಎಂದರು. 

‘ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಅಷ್ಟಲಕ್ಷ್ಮಿ ಕಾರ್ಯಕ್ರಮದ ಮೂಲಕ ಈಶಾನ್ಯ ರಾಜ್ಯಗಳ ಪರಕೀಯ ಭಾವನೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಪ್ರಾಕೃತ, ಪಾಲಿ, ಮರಾಠಿ, ಬಂಗಾಳಿ ಹಾಗೂ ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ’ ಎಂದರು.

‘ಭಾರತವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿರತೆ ಹೊಂದುವ ಮೂಲಕ ಜಗತ್ತಿಗೇ ಮಾದರಿಯಾಗಿದೆ. ಸುಧಾರಣೆ, ಆಚರಣೆ ಮತ್ತು ಪರಿವರ್ತನೆ ಎಂಬುದು ದೇಶದ ಆಡಳಿತದ ಮೂರು ಪ್ರಬಲ ಆಧಾರಸ್ತಂಭಗಳು. ದೇಶದ ಗಡಿಯನ್ನು ಭದ್ರಗೊಳಿಸುವಲ್ಲಿ ಸರ್ಕಾರವು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದೇ ವೇಳೆಗೆ ಎಡಪಂಥೀಯ ತೀವ್ರವಾದಿಗಳನ್ನು ಹತ್ತಿಕ್ಕುವ ಪ್ರಯತ್ನ ಚುರುಕುಗೊಳಿಸಲಾಗಿದೆ. ಇದರಿಂದ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ 38ಕ್ಕೆ ಕುಸಿದಿದೆ’ ಎಂದು ಮುರ್ಮು ಹೇಳಿದರು.

ಬಿಜೆಪಿಯ ಕರಪತ್ರ ಓದಿಸಿದೆ: ಖರ್ಗೆ

‘ಇದು ಸ್ಪಷ್ಟವಾಗಿ ರಾಜಕೀಯ ಭಾಷಣ. ಸಾಮಾನ್ಯ ಜನರು ನಿತ್ಯ ಅನುಭವಿಸುತ್ತಿರುವ ಯಾತನೆಗಳ ಉಲ್ಲೇಖವೇ ಇಲ್ಲ’ ಎಂದು ರಾಷ್ಟ್ರಪತಿಯವರ ಭಾಷಣವನ್ನು ಕಾಂಗ್ರೆಸ್‌ ಪಕ್ಷ ವ್ಯಾಖ್ಯಾನಿಸಿದೆ. ‘ಮೋದಿ ಸರ್ಕಾರ ರಾಷ್ಟ್ರಪತಿ ಅವರಿಂದ ಬಿಜೆಪಿಯ ಕರಪತ್ರ ಓದಿಸಿದ್ದು ದುರದೃಷ್ಟಕರ. ಸಣ್ಣ ಯೋಜನೆಗಳನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಂಡಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. 

ಸೋನಿಯಾಗಾಂಧಿ ಪ್ರತಿಕ್ರಿಯೆ: ವಾಗ್ವಾದ 

ರಾಷ್ಟ್ರಪತಿ ಅವರ ಭಾಷಣ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಆಡಿದ್ದಾರೆ ಎನ್ನಲಾದ ಮಾತಿನ ಕುರಿತು ಬಿಜೆಪಿಯು ತೀವ್ರವಾಗಿ ಆಕ್ಷೇಪಿಸಿದೆ. ಭಾಷಣದ ಬಳಿಕ ಸಂಸತ್ತಿನ ಆವರಣದಲ್ಲಿ ಸೋನಿಯಾ ಮಾತನಾಡಿದರು ಎನ್ನಲಾದ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಯಿತು. ಅದರ ಪ್ರಕಾರ ‘ಭಾಷಣ ಕಳಪೆಯಾಗಿತ್ತು. ಅಂತ್ಯದಲ್ಲಿ ರಾಷ್ಟ್ರಪತಿ ಬಳಲಿದಂತೆ ಕಂಡರು. ಓದಲು ಕಷ್ಟಪಡುತ್ತಿದ್ದರು. ಇದು ವಿಷಾದನೀಯ’ ಎಂಬುದು ಸೋನಿಯಾಗಾಂದಿ ಮಾತು. ‘ಭಾಷಣ ಬೇಸರ ಮೂಡಿಸಿತಾ’ ಎಂಬ ರಾಹುಲ್‌ ಪ್ರಶ್ನೆಗೆ ಸೋನಿಯಾ ಈ ಮಾತು ಹೇಳಿದರು ಎನ್ನಲಾಗಿದೆ. ವಿಡಿಯೊ ಉಲ್ಲೇಖಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಷ್ಟ್ರಪತಿ ಅವರನ್ನು ಕುರಿತು ಬಳಸಿದ ಪದಗಳು ಅಗೌರವ ಮೂಡಿಸುವಂತಹದ್ದು. ಸಂವಿಧಾನದ ಉನ್ನತ ಹುದ್ದೆಗೆ ಮಾಡಿರುವ ಅಪಮಾನವಾಗಿ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಗೌರವ್ ಗೊಗೋಯಿ ‘ರಾಷ್ಟ್ರಪತಿ ಅವರ ಆರೋಗ್ಯ ಕುರಿತು ಸೋನಿಯಾ ಅವರು ವ್ಯಕ್ತಪಡಿಸಿರುವ ಕಾಳಜಿ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದಿದ್ದಾರೆ. ‘ಸಂಸತ್‌ನ ನೂತನ ಕಟ್ಟಡದ ಉದ್ಘಾಟನೆ ರಾಮಮಂದಿರ ಉದ್ಘಾಟನೆಗೆ ಬಿಜೆಪಿಯವರು ರಾಷ್ಟ್ರಪತಿ ಅವರಿಗೆ ಆಹ್ವಾನ ನೀಡದೇ ಅವಮಾನಿಸಿದರು. ಬಿಜೆಪಿ ಪ್ರಶ್ನೆಗೆ ಉತ್ತರಿಸಲಿ ಎಂದು ಸವಾಲೊಡ್ಡುತ್ತೇನೆ’ ಎಂದು ಹೇಳಿದ್ದಾರೆ. ಸೋನಿಯಾ ಹೇಳಿಕೆಗೆ ಬಿಜೆಪಿಯ ಹಲವು ಮುಖಂಡರು ಪ್ರತಿಕ್ರಿಯಿಸಿ ಟೀಕಿಸಿದ್ದರೆ ಸೋನಿಯಾ ಸಮರ್ಥನೆಗೆ ನಿಂತ ಕಾಂಗ್ರೆಸ್ ಮುಖಂಡರು ‘ದೇಶದ ಪ್ರತಿಯೊಬ್ಬರು ರಾಷ್ಟ್ರಪತಿ ಕುರಿತು ಗೌರವ ಹೊಂದಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.