ADVERTISEMENT

ಅಧಿವೇಶನದಲ್ಲಿ ಕಾಂಗ್ರೆಸ್‌ ಜೊತೆ ಸಮನ್ವಯ ಇಲ್ಲ: ಟಿಎಂಸಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 1:57 IST
Last Updated 28 ನವೆಂಬರ್ 2021, 1:57 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಸಹಕರಿಸಲು ತನಗೆ ಆಸಕ್ತಿ ಇಲ್ಲ ಎಂದು ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಶನಿವಾರ ಹೇಳಿದೆ.

ಆದರೆ, ಸಾರ್ವಜನಿಕ ಹಿತಾಸಕ್ತಿ ವಿಷಯಗಳಿಗಾಗಿ, ಇತರ ವಿರೋಧ ಪಕ್ಷಗಳ ಜೊತೆಗೆ ಸಹಕರಿಸುವುದಾಗಿ ತಿಳಿಸಿದೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನ.29ರಂದು ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಟಿಎಂಸಿ ಬಹುತೇಕ ಭಾಗವಹಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ADVERTISEMENT

‘ಕಾಂಗ್ರೆಸ್‌ ನಾಯಕರು, ಮೊದಲಿಗೆ ತಮ್ಮ ಪಕ್ಷದೊಳಗೆ ಸಮನ್ವಯ ಸಾಧಿಸಲಿ. ಮೊದಲು, ಅವರು ತಮ್ಮ ಮನೆಯನ್ನು ಕ್ರಮಬದ್ಧವಾಗಿ ಇರಿಸಿಕೊಳ್ಳಲಿ. ಬಳಿಕ ಬೇರೆ ಪಕ್ಷಗಳ ಜೊತೆಗಿನ ಸಮನ್ವಯದ ಕುರಿತು ಯೋಚನೆ ಮಾಡಬೇಕು. ಕೇಸರಿ ಪಾಳಯದ ವಿರುದ್ಧ ಹೋರಾಡಲು ಕಾಂಗ್ರೆಸ್‌ ನಾಯಕರಿಗೆ ದೃಢ ನಿಶ್ಚಯದ ಕೊರತೆ ಇದೆ’ ಎಂದರು

ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಲ್ಲಿನ ನಿವಾಸದಲ್ಲಿ ನ.29ರಂದು ಪಕ್ಷದ ರಾಷ್ಟ್ರೀಯ ಸಮನ್ವಯತಾ ಸಮಿತಿ ಸಭೆ ನಡೆಯಲಿದ್ದು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಸದನದ ನಿರ್ವಹಣೆಗಾಗಿ ಟಿಎಂಸಿ ಸೇರಿದಂತೆ ಎಲ್ಲಾ ವಿಪಕ್ಷಗಳ ಜೊತೆ ಸಮನ್ವಯತೆ ಸಾಧಿಸುವುದಾಗಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿದ್ದರು.

ನಾಳೆ ಪ್ರತಿಪಕ್ಷಗಳ ನಾಯಕರ ಸಭೆ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧದ ಹೋರಾಟದ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳ ನಾಯಕರು ಸೋಮವಾರ (ನ.29) ಬೆಳಿಗ್ಗೆ ಸಭೆ ಸೇರಲಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷಗಳ ಸದನದ ನಾಯಕರಿಗೆ ಪತ್ರ ಬರೆದಿದ್ದಾರೆ. ಚಳಿಗಾಲದ ಅಧಿವೇಶನವು ಅದೇ ದಿನ ಆರಂಭವಾಗಲಿದ್ದು, ಡಿಸೆಂಬರ್‌ 23ರವರೆಗೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.