ನವದೆಹಲಿ: ‘₹70 ಸಾವಿರ ಮೌಲ್ಯದ ನನ್ನ ಕ್ಯಾಮೆರಾವನ್ನು ಮರಳಿ ಪಡೆಯಲು ಸಹಾಯ ಮಾಡಿ’ ಎಂದು ಸಾಮಾಜಿಕ ಜಾಲತಾಣದ ಇನ್‌ಫ್ಲ್ಯೂಯೆನ್ಸರ್ ಬಲ್ವಾನ್ ದಾಸ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕೋರಿ ‘ಎಕ್ಸ್’ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೇಟರಿಂಗ್ ಸಿಬ್ಬಂದಿಯು ಹೇಮಕುಂಟ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಹೆಚ್ಚು ದರದಲ್ಲಿ ಆಹಾರ ವಿತರಣೆ ಮಾಡುತ್ತಿದ್ದ ವಿಚಾರವನ್ನು ದಾಸ್ ಅವರು ಬಯಲಿಗೆಳೆದಿದ್ದರು. ‘ಕೇಟರಿಂಗ್ ಸಿಬ್ಬಂದಿಯೊಂದಿಗೆ ನಡೆದ ಜಗಳದಲ್ಲಿ ಸಿಬ್ಬಂದಿಯು ನನ್ನ ಕ್ಯಾಮೆರಾವನ್ನು ಅವರೊಂದಿಗೆ ತೆಗೆದುಕೊಂಡು ಹೋಗಿರಬಹುದು. ಆದ್ದರಿಂದ ನಮ್ಮ ಕ್ಯಾಮೆರಾವನ್ನು ಮರಳಿ ಪಡೆಯಲು ನನಗೆ ಸಹಾಯ ಮಾಡಿ’ ಎಂದು ದಾಸ್ ಕೋರಿದ್ದಾರೆ.
ಆಗಿದ್ದೇನು?: ದೇಶದಾದ್ಯಂತ ಪ್ರಯಾಣಿಸಿ ರೈಲುಗಳಲ್ಲಿ ವಿತರಿಸುವ ನೀರು, ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಇಂಥ ಸೌಕರ್ಯಗಳ ಕುರಿತು ಬಲ್ವಾನ್ ದಾಸ್ ಅವರು ವಿಡಿಯೊ ಮಾಡುತ್ತಾರೆ. ರಹಸ್ಯ ಕ್ಯಾಮೆರಾಗಳನ್ನು ಬಳಸುತ್ತಾರೆ.
ಮೇ 6ರಂದು ಹೇಮಕುಂಟ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದ ಅವರಿಗೆ, ಕೇಟರಿಂಗ್ ಸಿಬ್ಬಂದಿ ಕುಡಿಯುವ ನೀರಿಗಾಗಿ ಅಧಿಕ ದರವನ್ನು ಕೇಳಿದ್ದಾರೆ. ಈ ಬಗ್ಗೆ ದಾಸ್ ಅವರ ಆನ್‌ಲೈನ್ ಮೂಲಕ ದೂರು ದಾಖಲಿಸಿದರು. ರಾತ್ರಿ ಮಲಗುವ ವೇಳೆ ಕೇಟರಿಂಗ್ ಸಿಬ್ಬಂದಿ ದಾಸ್ ಅವರನ್ನು ಅಡುಗೆ ಮನೆಗೆ ಬರುವಂತೆ ಹೇಳಿದ್ದಾರೆ. ಇದನ್ನು ದಾಸ್ ನಿರಾಕರಿಸಿದರು.
ಬಳಿಕ ಮೇ 7ರ ಬೆಳಗಿನ ಜಾವದ ಹೊತ್ತಿಗೆ, ಕೇಟರಿಂಗ್ ಸಿಬ್ಬಂದಿ ದಾಸ್ ಅವರ ಕಾಲುಗಳನ್ನು ಎಳೆದು ಕೆಳಗೆ ಬೀಳಿಸಲು ಯತ್ನಿಸಿ, ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆಯೂ ದಾಸ್ ಅವರು ಆನ್‌ಲೈನ್ ಮೂಲಕ ದೂರು ನೀಡಿದರು. ಈ ದೃಶ್ಯಗಳನ್ನೂ ದಾಸ್ ಅವರ ತಮ್ಮ ರಹಸ್ಯ ಕ್ಯಾಮೆರಾ ಮೂಲಕ ಚಿತ್ರಿಸಿಕೊಂಡಿದ್ದರು. ಈ ಎಲ್ಲ ದೃಶ್ಯಗಳನ್ನು ಅವರ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊಗಳು ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು.
ಬಳಿಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಮಕುಂಟ್ ಎಕ್ಸ್‌ಪ್ರೆಸ್‌ನಲ್ಲಿ ಕೇಟರಿಂಗ್ ಮಾಡುತ್ತಿದ್ದ ರಾಜಸ್ಥಾನದ ಹೋಟೆಲ್‌ಗೆ ₹5 ಲಕ್ಷ ದಂಡ ವಿಧಿಸಿದ್ದರು. ಜೊತೆಗೆ, ಹೋಟೆಲ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.