
ನವದೆಹಲಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಹಕ್ಕುಗಳ ರಕ್ಷಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಏಳು ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಶುಕ್ರವಾರ ಸೂಚಿಸಿದೆ.
ಪವನ್ ಅವರು ಈಗಾಗಲೇ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿರುವುದನ್ನು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಗಮನಿಸಿದರು.
‘ಇಂತಹ ವಿಷಯಗಳಲ್ಲಿ ದೂರುದಾರರು ಮೊದಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಬಳಿ ತಮ್ಮ ಪ್ರತಿಭಟನೆಯನ್ನು ದಾಖಲಿಸಬೇಕು. ನಂತರ, ನ್ಯಾಯಾಲಯವನ್ನು ಸಂಪರ್ಕಿಸಬೇಕು’ ಎಂದು ನ್ಯಾಯಾಲಯವು ನಟ ಅಜಯ್ ದೇವಗನ್ ಅವರಿಗೆ ಸಂಬಂಧಿಸಿದ ಇಂತಹದ್ದೇ ಪ್ರಕರಣದಲ್ಲಿ ನೀಡಿದ್ದ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
‘ಪವನ್ ಅವರ ದೂರನ್ನು ಪರಿಗಣಿಸಬೇಕು. ಏಳು ದಿನಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಲಿಂಕ್‌ಗಳ ಬಗ್ಗೆ ಅನುಮಾನವಿದ್ದರೆ ಕೂಡಲೇ ಪವನ್ ಅವರಿಗೆ ಮಾಹಿತಿ ನೀಡಬೇಕು’ ಎಂದು ಹೈಕೋರ್ಟ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಿತು.
ಪವನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಜೆ.ಸಾಯಿ ದೀಪಕ್, ‘ಪವನ್ ಅವರ ವೈಯಕ್ತಿಕ ವಿವರ, ಚಿತ್ರ, ವಿಡಿಯೊಗಳನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿದೆ. ಗೂಗಲ್, ಮೆಟಾ ಮತ್ತು ಇ–ಕಾಮರ್ಸ್ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಕೃತಕ ಬುದ್ಧಿಮತ್ತೆ ವಿಡಿಯೊ, ಚಿತ್ರಗಳು ಹಾಗೂ ಸುದ್ದಿ ಬಗ್ಗೆ ಉಪ ಮುಖ್ಯಮಂತ್ರಿ ಪವನ್ ಅವರು ಅಸಮಾಧಾನಗೊಂಡಿದ್ದಾರೆ’ ಎಂದು ತಿಳಿಸಿದರು.
ತೆಗೆದುಹಾಕಬೇಕೆಂದು ಕೋರಿರುವ ವಿಷಯಗಳ ಯುಆರ್‌ಎಲ್ ವಿಳಾಸಗಳನ್ನು 48 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಒದಗಿಸುವಂತೆ ನ್ಯಾಯಾಲಯವು ದೂರುದಾರರಿಗೆ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಿತು.