ತಿರುಪತಿಯಲ್ಲಿ ಮುಡಿ ಸಮರ್ಪಿಸಿದ ಅನ್ನಾ ಲೆಜ್ನೆವಾ
(@JanaSenaParty)
ಹೈದರಾಬಾದ್: ಆಂಧ್ರ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ.
ಇವರ ಪುತ್ರ ಮಾರ್ಕ್ ಶಂಕರ್ (8) ಏಪ್ರಿಲ್ 8ರಂದು ಸಿಂಗಪುರದಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದರು. ಸಿಂಗಪುರಕ್ಕೆ ತೆರಳಿದ್ದ ಪವನ್ ಕಲ್ಯಾಣ್ ನಿನ್ನೆ ಪತ್ನಿ ಅನ್ನಾ ಮತ್ತು ಮಗನನ್ನು ಸುರಕ್ಷಿತವಾಗಿ ವಾಪಸ್ ಹೈದರಾಬಾದ್‌ಗೆ ಕರೆತಂದಿದ್ದಾರೆ. ಇದರ ಬೆನ್ನಲೇ ಪುತ್ರನ ಆರೋಗ್ಯ ಕ್ಷೇಮಕ್ಕಾಗಿ ಅನ್ನಾ ಲೆಜ್ನೆವಾ ಮುಡಿ ಸಮರ್ಪಿಸಿದ್ದಾರೆ ಎನ್ನಲಾಗಿದೆ.
ತಿರುಪತಿಯಲ್ಲಿ ಮುಡಿ ಅರ್ಪಿಸುತ್ತಿರುವ ಫೋಟೊಗಳನ್ನು ಜನಸೇನಾ ಪಕ್ಷ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಹೈದರಾಬಾದ್‌ಗೆ ಮಗ ಮಾರ್ಕ್ ಶಂಕರ್‌ನೊಂದಿಗೆ ವಾಪಸ್ ಆದ ಪವನ್ ಕಲ್ಯಾಣ್, ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಕುಟುಂಬದ ಜತೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ' ಎಂದು ಬರೆದುಕೊಂಡಿದ್ಧಾರೆ.
ಇದರ ಜತೆಗೆ ಪುತ್ರನ ಆರೋಗ್ಯ ಹೇಗಿದೆ ಎಂಬುದರ ಬಗ್ಗೆಯೂ ಪವನ್ ಕಲ್ಯಾಣ್ ಮಾಹಿತಿ ಹಂಚಿಕೊಂಡಿದ್ದಾರೆ. 'ಸಿಂಗಪುರದಲ್ಲಿ ನಡೆದ ಘಟನೆ ದುರದೃಷ್ಟಕರ. ಅವಘಡದಲ್ಲಿ ಗಾಯಗೊಂಡ ಮಗ ಮಾರ್ಕ್ ಶಂಕರ್‌ನ ಆರೋಗ್ಯ ಸ್ಥಿರವಾಗಿದೆ. ಅವನೀಗ ಚೇತರಿಸಿಕೊಳ್ಳುತ್ತಿದ್ದಾನೆ. ಶಂಕರ್‌ನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ' ಎಂದೂ ಅವರು ಹೇಳಿದ್ದಾರೆ.
ಸಿಂಗಪುರದ ಕಟ್ಟಡವೊಂದರಲ್ಲಿ ಏಪ್ರಿಲ್ 8ರಂದು ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬಾಲಕಿ ಮೃತಪಟ್ಟು, ಪವನ್ ಕಲ್ಯಾಣ್ ಪುತ್ರ ಸೇರಿದಂತೆ 20 ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.