ADVERTISEMENT

ಎಂವಿಎ ನಾಯಕರ ಮೇಲೆ ಕಣ್ಣಿಡಲು ಕೇಂದ್ರ ತನಿಖಾ ಸಂಸ್ಥೆಗಳ ಬಳಕೆ: ಪವಾರ್ ಶಂಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 15:37 IST
Last Updated 9 ಮಾರ್ಚ್ 2022, 15:37 IST
ಶರದ್ ಪವಾರ್
ಶರದ್ ಪವಾರ್   

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳ ನಡುವೆ, ‘ಆಡಳಿತಾರೂಢ ಮೈತ್ರಿಕೂಟದ ನಾಯಕರ ಮೇಲೆ ಕಣ್ಣಿಡಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬುಧವಾರ ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಅವರು ವಿಧಾನಸಭೆಯ ಉಪಾಧ್ಯಕ್ಷ ನರಹರಿ ಜಿರ್ವಾಲ್ ಅವರಿಗೆ ಪೆನ್ ಡ್ರೈವ್ ಸಲ್ಲಿಸಿದ ಒಂದು ದಿನದ ನಂತರ ಪವಾರ್ ಅವರು ಈ ರೀತಿ ಶಂಕೆ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ.

ಈ ಪೆನ್ ಡ್ರೈವ್‌ನಲ್ಲಿ ಒಟ್ಟು 125 ಗಂಟೆಗಳ ವಿಡಿಯೊ ಫೂಟೇಜ್ ಇದ್ದು, ಎಂವಿಎ ನಾಯಕರು ದೇವೇಂದ್ರ ಫಡಣವೀಸ್ ಮತ್ತು ಮಾಜಿ ಸಚಿವ ಗಿರೀಶ್ ಮಹಾಜನ್ ಅವರನ್ನು ಬಂಧಿಸಲು ಸಂಚು ರೂಪಿಸಿದ್ದಾರೆ ಎನ್ನುವ ವಿವರಗಳಿವೆ ಎನ್ನಲಾಗಿದೆ.

ADVERTISEMENT

ಈ ಕುರಿತು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಪವಾರ್, ‘ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವಿಡಿಯೊದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಲಾಗಿದ್ದು, ಅದಕ್ಕೂ ನನಗೂ ಸಂಬಂಧವಿಲ್ಲ. ಯಾರೇ ಆಗಲಿ ಒಬ್ಬರನ್ನು ಈ ರೀತಿಯಾಗಿ ಮುಗಿಸಲು ಸಾಧ್ಯವಿಲ್ಲ. 125 ಗಂಟೆಗಳ ರೆಕಾರ್ಡಿಂಗ್ ಇರುವುದು ಒಂದು ವೇಳೆ ನಿಜವಾಗಿದ್ದರೆ, ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕೇಂದ್ರ ತನಿಖಾ ಸಂಸ್ಥೆಗಳನ್ನು ಎಂವಿಎ ಮತ್ತು ಅದರ ಮೈತ್ರಿಕೂಟದ ನಾಯಕರ ಮೇಲೆ ಬಳಸುವುದನ್ನು ತಳ್ಳಿಹಾಕಲಾಗದು. ಆದರೆ, ರಾಜ್ಯ ಸರ್ಕಾರವು ಈ ರೆಕಾರ್ಡಿಂಗ್ ಟೇಪ್‌ಗಳ ಸತ್ಯಾಸತ್ಯತೆಯ ತನಿಖೆ ಮಾಡಲಿದೆ ಎನ್ನುವ ಬಗ್ಗೆ ನನಗೆ ಖಾತ್ರಿಯಿದೆ’ ಎಂದರು.

‘ಆದರೂ, ಫಡಣವೀಸ್ ಮತ್ತು ಅವರ ಸಹೋದ್ಯೋಗಿಗಳು ಸುಮಾರು 125 ಗಂಟೆಗಳ ವಿಡಿಯೊ ರೆಕಾರ್ಡಿಂಗ್ ಮಾಡಿರುವುದು ಶ್ಲಾಘನೀಯ’ ಎಂದು ಶರದ್ ಪವಾರ್ ವ್ಯಂಗ್ಯವಾಗಿ ನುಡಿದರು.

‘ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಶಿವಸೇನಾದ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರ ದೂರಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಮನ ಹರಿಸುತ್ತಾರೆ ಎಂಬ ಭರವಸೆ ಇದೆ’ ಎಂದೂ ಪವಾರ್ ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.