ADVERTISEMENT

ಭಯೋತ್ಪಾದನೆ ಪ್ರಕರಣ: ಪಿಡಿಪಿ ಯುವಘಟಕದ ಅಧ್ಯಕ್ಷನ ಬಂಧನ

ಪಿಟಿಐ
Published 25 ನವೆಂಬರ್ 2020, 11:06 IST
Last Updated 25 ನವೆಂಬರ್ 2020, 11:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಯುವಘಟಕದ ಅಧ್ಯಕ್ಷ ವಹೀದ್‌ ಪರ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಬುಧವಾರ ಬಂಧಿಸಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ವಹೀದ್‌ ಅವರನ್ನು, ಸೋಮವಾರದಿಂದ ಇಲ್ಲಿನ ಎನ್‌ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಜೊತೆ ವಹೀದ್‌ಗೆ ಸಂಪರ್ಕವಿದೆ ಎನ್ನುವ ಆರೋಪದಡಿ ಅವರನ್ನು ಬಂಧಿಸಲಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ, ಅದರಲ್ಲೂ ಪ್ರಮುಖವಾಗಿ ಪುಲ್ವಾಮಾದಲ್ಲಿ ಪಿಡಿಪಿಯನ್ನು ವಹೀದ್‌ ಪುನರ್‌ಸ್ಥಾಪಿಸಿದ್ದರು. ಉಗ್ರರಿಗೆ ನೆರವು ನೀಡಿದ ಪ್ರಕರಣದಲ್ಲಿ ಅಮಾನತುಗೊಂಡಿರುವ ಡಿಎಸ್‌ಪಿ ದೇವೇಂದರ್‌ ಸಿಂಗ್‌ ಅವರ ತನಿಖೆ ವೇಳೆ ವಹೀದ್‌ ಹೆಸರು ಕೇಳಿಬಂದಿತ್ತು. ‘ಭಯೋತ್ಪಾದನಾ ಸಂಚಿನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗೆ ಇತರೆ ಆರೋಪಿಗಳ ಜೊತೆಗೂಡಿ ಬೆಂಬಲ ನೀಡಿದ ನವೀದ್‌ ಬಾಬು–ದೇವೇಂದರ್‌ ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಹೀದ್‌ ಉರ್‌ ರೆಹಮಾನ್‌ ಪರ್ರಾ ಅವರನ್ನು ಬಂಧಿಸಿದೆ’ ಎಂದು ಎನ್‌ಐಎ ವಕ್ತಾರರೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.