ADVERTISEMENT

ಪೆಗಾಸಸ್ ಚರ್ಚೆ: ಸಂಸತ್ತಿನಲ್ಲಿ ಕೇಂದ್ರ ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

ಪಿಟಿಐ
Published 28 ಜುಲೈ 2021, 8:32 IST
Last Updated 28 ಜುಲೈ 2021, 8:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೆಗಾಸಸ್ ಗೂಢಚರ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಸಂಸತ್ತಿನಲ್ಲಿ ಏಕರೂಪದ ನಿಲುವಳಿ ಸೂಚನೆ ಮಂಡಿಸಲು ವಿರೋಧ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅಗತ್ಯವಾದ ಕಾರ್ಯತಂತ್ರ ರೂಪಿಸುವ ಸಂಬಂಧ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ವಿವಿಧ ಪಕ್ಷಗಳ ನಾಯಕರು ಬುಧವಾರ ಸಭೆ ಸೇರಿ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ,ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ರೀತಿ ಲೋಕಸಭೆಯಲ್ಲಿನ ವಿರೋಧ ಪಕ್ಷಗಳ ನಾಯಕರ ಸಭೆ ಮಂಗಳವಾರ ಸಂಜೆ ನಡೆದಿದ್ದು, ಆ ಸಭೆಯಲ್ಲೂ ರಾಹುಲ್ ಗಾಂಧಿ ಭಾಗವಹಿಸಿದ್ದರು.

ADVERTISEMENT

‘ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರು ಸದನದಲ್ಲಿ ಪೆಗಾಸಸ್ ವಿಷಯದ ಚರ್ಚೆಯನ್ನು ಮುನ್ನಲೆಗೆ ತಂದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ತಿಳಿಸಿದ್ದಾರೆ‘ ಎಂದು ಹಿರಿಯ ನಾಯಕರೊಬ್ಬರು ಸಭೆಯ ನಂತರ ತಿಳಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ಸಭೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಚರ್ಚಿಸಿದ್ದೇವೆ. ಪೆಗಾಸಸ್‌ ಗೂಢಚರ್ಯೆ, ಬೆಲೆ ಏರಿಕೆ ಮತ್ತು ಕೃಷಿ ಕಾಯ್ದೆಗಳ ವಿಚಾರದಲ್ಲಿ ರಾಜಿಮಾಡಿಕೊಳ್ಳುವುದಿಲ್ಲ‘ ಎಂದು ತಿಳಿಸಿದರು.

ಇದಕ್ಕೂ ಮುನ್ನ, ಸಮಾನ ಮನಸ್ಕ ಪಕ್ಷಗಳ ಸದಸ್ಯರು ಸೇರಿದ್ದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಸಂಸತ್ ಕಲಾಪ ನಡೆಯಲು ವಿರೋಧ ಪಕ್ಷಗಳು ಅವಕಾಶ ನೀಡುತ್ತಿಲ್ಲ ಎಂದು ಸರ್ಕಾರ, ನಮ್ಮ ವಿರುದ್ಧ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ. ಆದರೆ, ವಿರೋಧ ಪಕ್ಷಗಳು ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ, ದೇಶದ ಭದ್ರತೆ ಮತ್ತು ರೈತರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇವೆ. ಅದನ್ನು ಮುಂದುವರಿಸುತ್ತೇವೆ‘ ಎಂದು ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಶಿವಸೇನೆ, ಆರ್‌ಜೆಡಿ, ಎಸ್‌ಪಿ, ಸಿಪಿಐಎಂ, ಸಿಪಿಐ, ಎನ್‌ಸಿ, ಎಎಪಿ, ಐಯುಎಂಎಲ್, ಆರ್‌ಎಸ್‌ಪಿ, ಕೆಸಿಎಂ ಮತ್ತು ವಿಸಿಕೆ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.