ADVERTISEMENT

ವಿವಾದಕ್ಕೆ ಕಾರಣವಾದ ಆರೋಪ ಪಟ್ಟಿ

2017ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಗುಂಪುದಾಳಿ ಪ್ರಕರಣ

ತಬಿನಾ ಅಂಜುಮ್‌
Published 29 ಜೂನ್ 2019, 18:55 IST
Last Updated 29 ಜೂನ್ 2019, 18:55 IST
ಗೋವು ಸಾಗಣೆ ಆರೋಪದ ಮೇಲೆ ಎರಡು ವರ್ಷದ ಬಳಿಕ ಆರೋಪಪಟ್ಟಿ ದಾಖಲಾಗಿರುವ ಪೆಹ್ಲು ಖಾನ್ ಅವರ ಕುಟುಂಬ.  (ಸಂಗ್ರಹ ಚಿತ್ರ)
ಗೋವು ಸಾಗಣೆ ಆರೋಪದ ಮೇಲೆ ಎರಡು ವರ್ಷದ ಬಳಿಕ ಆರೋಪಪಟ್ಟಿ ದಾಖಲಾಗಿರುವ ಪೆಹ್ಲು ಖಾನ್ ಅವರ ಕುಟುಂಬ.  (ಸಂಗ್ರಹ ಚಿತ್ರ)   

ಜೈಪುರ: ಗೋವು ಕಳ್ಳಸಾಗಣೆ ಮಾಡುತ್ತಿದ್ದ ಶಂಕೆಯ ಮೇಲೆ ಗುಂಪು ದಾಳಿಗೆ ತುತ್ತಾಗಿ ಮೃತಪಟ್ಟಿದ್ದ ಪೆಹ್ಲು ಖಾನ್‌ (55) ಮತ್ತು ಅವರ ಇಬ್ಬರು ಮಕ್ಕಳ ವಿರುದ್ಧ ರಾಜಸ್ಥಾನದ ಪೊಲೀಸರು ಅಕ್ರಮವಾಗಿ ಗೋವು ಸಾಗಣೆಗೆ ಸಂಬಂಧಿಸಿದಂತೆ ದೋಷಾ
ರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಅಂದರೆ, 2018ರ ಡಿಸೆಂಬರ್‌ 30ರಂದೇ ಅಂತಿಮ ಪ್ರಥಮ ತನಿಖಾ ವರದಿಯನ್ನು ಪೊಲೀಸರು ದಾಖಲಿಸಿದ್ದರು.

ಪೆಹ್ಲು ಖಾನ್, ಇಬ್ಬರು ಮಕ್ಕಳು, ಇವರ ಜೊತೆಗಿದ್ದ ಅಜ್ಮತ್‌, ರಫೀಕ್, ಗೋವುಸಾಗಣೆಗೆ ಬಳಸಲಾಗಿದ್ದ ಟ್ರಕ್‌ನ ಮಾಲೀಕ ಸೇರಿದಂತೆ 12 ಜನರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು.

ADVERTISEMENT

ಸದ್ಯ, ಪೆಹ್ಲು ಖಾನ್ ಅಲ್ಲದೆ ಅವರ ಇಬ್ಬರು ಪುತ್ರರ ವಿರುದ್ಧವೂ ಬೆಹ್‌ರೊರ್‌ನ ಹೆಚ್ಚುವರಿ ಪ್ರಧಾನ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟರ ಕೋರ್ಟ್‌ನಲ್ಲಿ ಮೇ 29ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪೆಹ್ಲು ಖಾನ್‌ ಅವರ ಮೇಲೆ 2017ರ ಏಪ್ರಿಲ್‌ 1ರಂದು ದೆಹಲಿ–ಅಲ್ವಾರ್‌ ಹೆದ್ದಾರಿಯಲ್ಲಿ, ರಾಜಸ್ಥಾನದ ಬೆಹ್‌ರೊರ್ ಸಮೀಪ ಗುಂಪು ಹಲ್ಲೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಬಳಿಕ ಗುಂಪು ದಾಳಿಗೆ ಸಂಬಂಧಿಸಿ ಒಂದು ಎಫ್‌ಐಆರ್‌ ಹಾಗೂ ಗೋವುಅಕ್ರಮ ಸಾಗಣೆಗೆ ಸಂಬಂಧಿಸಿ ಖಾನ್‌ ಮತ್ತು ಇತರರ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಿ ಸಲಾಗಿತ್ತು.

ಲೋಪವಿದ್ದರೆ ಮರುತನಿಖೆ’

‘ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪವಾಗಿದ್ದರೆ ಮರುತನಿಖೆ ನಡೆಸಲಾಗುವುದು’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರವಸೆ ನೀಡಿದ್ದಾರೆ.

‘ಕಾಂಗ್ರೆಸ್‌ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋವು ರಕ್ಷಕರ ಹೆಸರಿನಲ್ಲಿ ಹತ್ಯೆ ಮಾಡುವವರನ್ನು ಕಾನೂನಿನಡಿ ಶಿಕ್ಷಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಇದರ ತನಿಖೆ ಕೈಗೊಳ್ಳಲಾಗಿತ್ತು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.