ನವದೆಹಲಿ: ‘ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಉಳಿತಾಯ ಮಾಡಿ ಪಿಂಚಣಿ ನೀಡುವ ‘ಎನ್‌ಪಿಎಸ್ ವಾತ್ಸಲ್ಯ’ ಯೋಜನೆಗೆ ಸೆ. 18ರಂದು ಕೇಂದ್ರ ಸರ್ಕಾರ ಚಾಲನೆ ನೀಡಲಿದೆ’ ಎಂದು ಹಣಕಾಸು ಸಚಿವಾಲಯವು ಸೋಮವಾರ ತಿಳಿಸಿದೆ.
‘ಎನ್‌ಪಿಸ್ ವಾತ್ಯಲ್ಸ’ವು ಎಲ್ಲರಿಗೂ ಅನುಕೂಲ ಮಾಡುವಂತಹ ಹೂಡಿಕೆಗೆ ಅವಕಾಶ ಕಲ್ಪಿಸಿದ್ದು, ತಮ್ಮ ಮಕ್ಕಳ ಹೆಸರಿನಲ್ಲಿ ವಾರ್ಷಿಕ ₹1 ಸಾವಿರ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ. ಎಲ್ಲ ವರ್ಗದ ಆರ್ಥಿಕ ಹಿನ್ನೆಲೆ ಹೊಂದಿರುವವರಿಗೂ ಈ ಯೋಜನೆಯೂ ಲಭ್ಯವಾಗಲಿದೆ’ ಎಂದು ಸಚಿವಾಲಯ ತಿಳಿಸಿದೆ.
ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಯೋಜನೆಗೆ ಸೇರ್ಪಡೆಗೊಳ್ಳುವವರಿಗೆ ಅವಕಾಶ ಮಾಡಿಕೊಡುವ ಆನ್‌ಲೈನ್ ವೇದಿಕೆಗೂ ಚಾಲನೆ ನೀಡಲಿದ್ದಾರೆ. ಜುಲೈನಲ್ಲಿ ಅವರು ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು.
ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಅಡಿಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ನವದೆಹಲಿ ಮಾತ್ರವಲ್ಲದೇ, ದೇಶದ 75 ಸ್ಥಳಗಳಲ್ಲಿ ಏಕಕಾಲಕ್ಕೆ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಇತರೆ ಪ್ರದೇಶದವರು ವಿಡಿಯೊ ಕಾನ್ಪರೆನ್ಸ್ ಮೂಲಕ ಭಾಗಿಯಾಗಲಿದ್ದು, ಕಾರ್ಯಕ್ರಮದಲ್ಲಿ ಹೊಸದಾಗಿ ನೋಂದಣಿ ಮಾಡಿದವರಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (ಪ್ರಾಣ್) ವಿತರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.