ADVERTISEMENT

ಮಾತಿನ ಮಧ್ಯೆ ಹೊರನಡೆದ ಜನ

ಮಾರ್ಗದುದ್ದಕ್ಕೂ ಮುಖ ತೋರದೆ ನಿರಾಸೆ ಮೂಡಿಸಿದ ಟ್ರಂಪ್‌, ಮೋದಿ.. ಮುಜುಗರ ಮೂಡಿಸಿದ ನಡೆ...

ಸಿದ್ದಯ್ಯ ಹಿರೇಮಠ
Published 24 ಫೆಬ್ರುವರಿ 2020, 20:21 IST
Last Updated 24 ಫೆಬ್ರುವರಿ 2020, 20:21 IST

ಅಹಮದಾಬಾದ್: ಸರ್ದಾರ್‌ ಪಟೇಲ್‌ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್‌’ ಸಮಾರಂಭದಲ್ಲಿ ಜನರ ನಡವಳಿಕೆಯು ಮೋದಿ ಅವರಿಗೆ ತೀವ್ರ ಮುಜುಗರ ಉಂಟುಮಾಡಿತು.

ಟ್ರಂಪ್‌ ಭಾಷಣದ ನಡುವೆಯೇ ಆಸನ ಬಿಟ್ಟು ಎದ್ದ ಸಾವಿರಾರು ಜನ ಕ್ರೀಡಾಂಗಣದಿಂದ ಹೊರ
ಹೋಗಲು ಆರಂಭಿಸಿದರು ಮೋದಿ ಮಾತಿಗಿಳಿದಾಗಲೂ ಜನರು ಹೊರ
ನಡೆದಿದ್ದು ಸಂಘಟಕರಿಗೆ ಮುಜುಗರ ಉಂಟು ಮಾಡಿತು. ನೆರೆದವರಲ್ಲಿ ಅರ್ಧದಷ್ಟು ಜನ ಭಾಷಣದ ಮಧ್ಯೆಯೇ ಹೊರ ನಡೆದಿದ್ದು, ಮೋದಿ ಅವರ ಉತ್ಸಾಹಕ್ಕೆ ಭಂಗ ತಂದಂತೆ ತೋರಿತು.

ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಟ್ರಂಪ್‌ ಅವರನ್ನು ನೋಡಲು ಬೆಳಿಗ್ಗೆ 7 ಗಂಟೆಯಿಂದಲೇ ಮೊಟೆರಾದಲ್ಲಿನ ಕ್ರೀಡಾಂಗಣಕ್ಕೆ ಬಂದಿದ್ದ ಅಂದಾಜು 1.25 ಲಕ್ಷ ಜನ, ಟ್ರಂಪ್‌ ಮತ್ತು ಅವರ ಪತ್ನಿ ಮೆಲೇನಿಯಾ ವೇದಿಕೆಗೆ ಬಂದ ಕೂಡಲೇ ಎದ್ದು ನಿಂತು ಗೌರವ ಸೂಚಿಸಿದರು. ಮೋದಿ ಅತಿಥಿಗಳನ್ನು ಸ್ವಾಗತಿಸಲು ಅಣಿಯಾಗುತ್ತಿದ್ದಂತೆಯೇ ‘ಮೋದಿ, ಮೋದಿ’ ಎಂಬ ಕರತಾಡನ ಮುಗಿಲು ಮುಟ್ಟಿತ್ತು.

ADVERTISEMENT

ಬೆಳಿಗ್ಗೆಯೇ ಮನೆಯಿಂದ ಹೊರ ಬಂದು, ಉರಿ ಬಿಸಿಲಲ್ಲೇ ಕಾದು ಕುಳಿತಿದ್ದ ಜನ, ಟ್ರಂಪ್‌ಗಿಂತ ಮೊದಲು ಮೋದಿ ಮಾತಿಗಿಳಿದಾಗ ಸಂಯಮದಿಂದ ಆಲಿಸಿ ಚಪ್ಪಾಳೆ ತಟ್ಟಿದರು. ಜನರ ಉತ್ಸಾಹ ಕಂಡು ಪುಳಕಿತರಾದ ಮೋದಿ, ‘ಅಧ್ಯಕ್ಷ ಟ್ರಂಪ್‌ ಭಾಷಣದ ನಂತರ ನಾನು ಮತ್ತೆ ಮಾತನಾಡುವೆ’ ಎಂದು ಹೇಳಿದ್ದರು.

ಟ್ರಂಪ್‌ ಭಾಷಣದ ಆರಂಭದಲ್ಲಿ ಚಪ್ಪಾಳೆ ತಟ್ಟಿ ಪ್ರತಿಕ್ರಿಯಿಸಿದ ಜನ, ಇದ್ದಕ್ಕಿದ್ದಂತೆಯೇ ಎದ್ದು ನಡೆಯಲಾರಂಭಿಸಿದರು. ಭದ್ರತೆಗೆ ನಿಯುಕ್ತರಾಗಿದ್ದ ಸಿಬ್ಬಂದಿ ಕುಳಿತುಕೊಳ್ಳುವಂತೆ ಸೂಚಿಸಿದರೂ ಕೇಳದೆ ನಿರ್ಗಮನ ದ್ವಾರದತ್ತ ಮುಖಮಾಡಿದರು. ಟ್ರಂಪ್‌ ತಮ್ಮ ಮಾತಿಗೆ ವಿರಾಮ ಹೇಳಿದ ನಂತರ ಮತ್ತೆ ಮೋದಿ ಮಾತಿಗಿಳಿದಾಗ, ಜನರು ಕುಳಿತುಕೊಳ್ಳಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು.

ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರೇಕ್ಷಕರತ್ತ ತೆರಳಿ ಕೈ ಬೀಸಿದಂತೆಯೇ ಇಲ್ಲೂ ಟ್ರಂಪ್‌ ಅವರನ್ನು ಜನರತ್ತ ಕರೆದೊಯ್ಯಬೇಕೆಂಬ ಆಲೋಚನೆಯಲ್ಲಿದ್ದ ಮೋದಿ ಕೆಲವೇ ಕೆಲವರ ಬಳಿ ತೆರಳಿ ಅತಿಥಿಗಳೊಂದಿಗೆ ಕ್ರೀಡಾಂಗಣದಿಂದ ಹೊರನಡೆದರು.

‘ಭಾರಿ ಭದ್ರತೆ ಮತ್ತು ನೂಕುನುಗ್ಗಲಿನಿಂದ ಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆಯನ್ನು ಮನಗಂಡ ಜನತೆ, ಮನೆಗೆ ಮರಳುವುದು ತಡವಾಗಬಹುದು ಎಂದೇ ತರಾತುರಿಯಲ್ಲಿ ಕಾಲ್ಕಿತ್ತಿರಲೂಬಹುದು’ ಎಂದು ಮೋದಿ ಅವರ ಬಹುತೇಕ ಕಾರ್ಯಕ್ರಮಕ್ಕೆ ಹಾಜರಾಗುವ ಸ್ಥಳೀಯ ನಿವಾಸಿ ಸಪನ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇವಾಂಕಾ ಸೆಲ್ಫಿ: ಮೂರು ವರ್ಷಗಳ ನಂತರ ಭಾರತಕ್ಕೆ ಬಂದಿರುವ ಟ್ರಂಪ್‌ ಪುತ್ರಿ ಇವಾಂಕಾ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮಕ್ಕೆ ಬಂದವರ ಸೆಲ್ಫಿಗೆ ಪೋಸ್‌ ನೀಡಿ ಗಮನ ಸೆಳೆದರು.

ಮುಖ ಕಾಣದ್ದಕ್ಕೆ ಬೇಸರ: ಸರ್ದಾರ್‌ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮ ಹಾಗೂ ಅಲ್ಲಿಂದ ಮೊಟೆರಾದ ಕ್ರೀಡಾಂಗಣದವರೆಗೆ ಅಂದಾಜು 22 ಕಿಲೋಮೀಟರ್‌ವರೆಗೆ ವಾಹನದಲ್ಲಿ ಬಂದ ವಿಶೇಷ ಅತಿಥಿಗಳನ್ನು ಸ್ವಾಗತಿಸಲು ನಿಂತಿದ್ದ ಸಾವಿರಾರು ಜನರಿಗೆ ಟ್ರಂಪ್‌ ಮುಖವೂ ಕಾಣದೆ ತೀವ್ರ ಬೇಸರ ಉಂಟಾಯಿತು.

‘ಟ್ರಂಪ್‌ ಭಾಷಣ ಇಷ್ಟವಾಯ್ತು’

‘ಪ್ರಧಾನಿ ಮೋದಿ ಅವರಿಗಿಂತ ನನಗೆ ಟ್ರಂಪ್‌ ಭಾಷಣವೇ ಇಷ್ಟವಾಯ್ತು’ ಎಂದು ದೂರದ ಆನಂದ್‌ ಜಿಲ್ಲೆಯಿಂದ ಬಂದಿದ್ದ ಸುನಂದಾ ಬೆನ್‌ ಎಂಬುವವರು ಪ್ರತಿಕ್ರಿಯಿಸಿದರು.

‘ಟ್ರಂಪ್‌ ಅವರೇ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರಿಂದ ಮೋದಿ ಹೆಚ್ಚು ಮಾತನಾಡಲಿಲ್ಲ. ಜಾಗತಿಕ ವಿಷಯಗಳನ್ನು ಪ್ರಸ್ತಾಪಿಸಿದ ಟ್ರಂಪ್‌ ಮಾತುಗಳು ಮುದ ನೀಡಿದವು. ಬಿಸಿಲಲ್ಲಿ ಕಾದು ಕುಳಿದವರು ಅವರ ಮಾತಿನ ಮಧ್ಯೆ ಎದ್ದು ಹೋಗಿದ್ದು ನಿಜ. ಹೊರದೇಶದ ಅತಿಥಿಗಳು ಬಂದಾಗ ಹೀಗೆ ವರ್ತಿಸಬಾರದಿತ್ತು’ ಎಂದು ಸ್ಥಳೀಯ ಯುವತಿ ನಂದಿನಿ ನೇಚಿ ಎಂಬುವವರು ಬೇಸರ ವ್ಯಕ್ತಪಡಿಸಿದರು.

ಜನರು ಮಾತಿನ ಮಧ್ಯೆ ಎದ್ದು ನಡೆದಿದ್ದನ್ನು ನೋಡಿದರೆ ಇಷ್ಟೆಲ್ಲ ಖರ್ಚು ಮಾಡಿ ಕಾರ್ಯಕ್ರಮ ಆಯೋಜಿಸಬೇಕಿತ್ತೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ ಎಂದವರು ವಡೋದರಾದಿಂದ ಬಂದಿದ್ದ ವಿನಾಯಕ ಪಂಜಾನಿ.

ಟ್ರಂಪ್‌ ಔತಣ ಕೂಟಕ್ಕೆ ಬಿಎಸ್‌ವೈ

ಬೆಂಗಳೂರು: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಗೌರವಾರ್ಥ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿರುವ ಔತಣ ಕೂಟದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.